ನವದೆಹಲಿ, ನ.11 (DaijiworldNews/PY): "ಚೀನಾ ಹಾಗೂ ತೈವಾನ್ ದೇಶಗಳ ನಡುವಿನ ಬಿಕ್ಕಟ್ಟು ಉಲ್ಬಣವಾಗಿರುವ ಹಿನ್ನೆಲೆ ತಾನು ಭಾರತದಲ್ಲಿಯೇ ಇರಲು ಬಯಸಿದ್ದೇನೆ" ಎಂದು ಬೌದ್ಧ ಧಾರ್ಮಿಕ ಗುರು ದಲೈಲಾಮಾ ತಿಳಿಸಿದ್ದಾರೆ.
ಆನ್ಲೈನ್ನ ಸಭೆಯಲ್ಲಿ ಮಾತನಾಡಿದ ಅವರು, "ಭಾರತ ಧಾರ್ಮಿಕ ಸೌಹಾರ್ದತೆಯ ಕೇಂದ್ರ ಬಿಂದುವಾಗಿದ್ದು, ನಾನು ಇಲ್ಲಿಯೇ ಇರಲು ಇಚ್ಛಿಸುತ್ತೇನೆ. ಚೀನಾದ ನಾಯಕರು ವಿಭಿನ್ನ ಸಂಸ್ಕೃತಿಗಳ ಪ್ರಾಮುಖ್ಯತೆಯನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಚೀನಾದ ಕಮ್ಯುನಿಸ್ಟ್ ಸರ್ಕಾರ ಸಮಾಜವನ್ನು ಕಠಿಣವಾಗಿ ನಿಯಂತ್ರಿಸಲು ಅನುಸರಿಸುತ್ತಿರುವ ನೀತಿಗಳು ತುಂಬಾ ಹಾನಿಕಾರಕವಾಗಿದೆ" ಎಂದಿದ್ದಾರೆ.
"ಟಿಬೆಟ್ನಲ್ಲಿ ಚೀನಾ ಆಡಳಿತದ ವಿರುದ್ದ ಬಂಡಾಯ ವಿಫಲವಾದ ಕಾರಣ ದಲೈಲಾಮಾ ಭಾರತದಲ್ಲಿದ್ದಾರೆ. ಸಾಮಾನ್ಯ ಬೌದ್ಧ ಸನ್ಯಾಸಿ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಸ್ಥಳೀಯ, ರಾಜಕೀಯ ಸಂಕೀರ್ಣತೆಯಗಳ ಭಾಗವಾಗಲು ಇಷ್ಟವಿಲ್ಲ" ಎಂದು ತಿಳಿಸಿದ್ದಾರೆ.
"ತಮಗೆ ಷಿ ಜಿನ್ಪಿಂಗ್ ಅವರನ್ನು ಭೇಟಿ ಮಾಡುವ ಯಾವುದೇ ಉದ್ದೇಶ ಇಲ್ಲ. ತಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಇಚ್ಛೆ ಇದೆ" ಎಂದಿದ್ದಾರೆ.