ನವದೆಹಲಿ, ನ.11 (DaijiworldNews/PY): "ಉತ್ತರಪ್ರದೇಶದಲ್ಲಿ ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವಾಗಿದೆ" ಎಂದು ಕಾಂಗ್ರೆಸ್ ನಾಯಕಿ ಕಿಡಿಕಾರಿದ್ದಾರೆ.
ಗುತ್ತಿಗೆದಾರ ಸಿಬ್ಬಂದಿಯೋರ್ವರಿಗೆ ಲಕ್ನೋದ ಬಾಪು ಭವನ್ನಲ್ಲಿ ಕಿರುಕುಳ ನೀಡಿದ್ದ ಆರೋಪದಡಿ ಆಧಿಕಾರಿಯೊಬ್ಬರನ್ನು ಬಂಧಿಸಿರುವ ವರದಿಯನ್ನು ಅವರು ಉಲ್ಲೇಖಿಸಿದ್ದು, ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ರಸ್ತೆ, ಸಚಿವಾಲಯ ಅಥವಾ ಯಾವುದೇ ಸ್ಥಳವಿರಲಿ ಯುಪಿಯಲ್ಲಿ ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವಾಗಿದೆ. ಇದು ವಾಸ್ತವ ಸ್ಥಿತಿ" ಎಂದಿದ್ದಾರೆ.
"ಲೈಂಗಿಕ ದೌರ್ಜನ್ಯದ ದೂರಿನ ಬಗ್ಗೆ ಕ್ರಮ ಕೈಗೊಳ್ಳದ ಕಾರಣ ಉತ್ತರಪ್ರದೇಶದ ಸಹೋದರಿಯೊಬ್ಬರು ಘಟನೆಯ ವಿಡಿಯೋ ಮಾಡಬೇಕಾಯಿತು. ಆಕೆಯ ತಾಳ್ಮೆ ಹಾಗೂ ಹೋರಾಟದ ಶಕ್ತಿ ಎಂತದ್ದಿರಬಹುದು" ಎಂದು ಹೇಳಿದ್ದಾರೆ.
"ಉತ್ತರಪ್ರದೇಶದ ಮಹಿಳೆಯರು ತಮ್ಮನ್ನು ರಕ್ಷಿಸಿಕೊಳ್ಳಲು ಒಟ್ಟಾಗಬೇಕು. ನೀನೊಬ್ಬ ಮಹಿಳೆ, ನೀನು ಹೋರಾಡಬೇಕು. ನಿನ್ನೊಂದಿಗೆ ದೇಶದ ಎಲ್ಲಾ ಮಹಿಳೆಯರು ಇದ್ದೇವೆ" ಎಂದಿದ್ದಾರೆ.