ನವದೆಹಲಿ, ನ.11 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಅನೇಕ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದು, ಕಳೆದ 100 ದಿನಗಳಲ್ಲಿ ತಮ್ಮ ನೇತೃತ್ವದ ಸರ್ಕಾರ ನಡೆಸಿರುವ ಆಡಳಿತ, ಸುಧಾರಣಾ ಕ್ರಮಗಳು, ಕೈಗೊಂಡಿರುವ ಯೋಜನೆಗಳ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, "ರಾಜ್ಯದ ಜನತೆಯ ವಿಶ್ವಾಸ ಪಡೆಯಲು ಮತ್ತು ಜನರ ಹಿತದೃಷ್ಟಿಯಿಂದ ಇನ್ನಷ್ಟು ಉತ್ತಮ ಕೆಲಸ ಮಾಡಿ ಎಂದು ಪ್ರಧಾನಿ ಪ್ರೋತ್ಸಾಹದ ಮಾತುಗಳನ್ನು ನುಡಿದಿದ್ದಾರೆ" ಎಂದರು.
ಇನ್ನು ಬಿಟ್ ಕಾಯಿನ್ ದಂಧೆ ಪ್ರಸ್ತಾಪಿಸಲು ನಾನಾಗಿಯೇ ಪ್ರಯತ್ನಪಟ್ಟೆ, ಆಗ ಪ್ರಧಾನ ಮಂತ್ರಿಗಳು ಇವುಗಳ ಬಗ್ಗೆಯೆಲ್ಲಾ ತಲೆಕೆಡಿಸಿಕೊಳ್ಳಬೇಡಿ, ನೀವು ನಿಷ್ಠೆ, ದಿಟ್ಟತನದಿಂದ ಕೆಲಸವನ್ನು ಮಾಡಿಕೊಂಡು ಹೋಗಿ, ಎಲ್ಲಾ ಸರಿ ಹೋಗುತ್ತದೆ ಎಂದು ಸಲಹೆ ನೀಡಿದ್ದಾರೆ" ಎಂದಿದ್ದಾರೆ.
ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದ ಬಗ್ಗೆ ಕೂಡ ಪ್ರಧಾನಿ ಜೊತೆ ಚರ್ಚೆ ನಡೆಸಿದ್ದು, ಹಾನಗಲ್ ನಲ್ಲಿ ಅಲ್ಪ ಪ್ರಮಾಣದಲ್ಲಿ ಸೋತಿದ್ದೇವೆ ಎಂದಾಗ ಚುನಾವಣೆಯಲ್ಲಿ ಸೋಲು-ಗೆಲುವು ಇದ್ದಿದ್ದೇ, ಎದೆಗುಂದಬೇಡಿ ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಕೆಲಸಗಳನ್ನು ಮಾಡಿ ಎಂದಿದ್ದಾರೆ" ಎಂದು ಬೊಮ್ಮಾಯಿ ತಿಳಿಸಿದ್ದಾರೆ.