ಬೆಂಗಳೂರು, ನ.11 (DaijiworldNews/PY): ಉಳುವವನೇ ಭೂಮಿಯ ಒಡೆಯ ಕಾನೂನನ್ನು ಮೊದಲಿಗೆ ಜಾರಿಗೆ ತಂದಿದ್ದು ಹೈದರಾಲಿ. ಹೀಗೆ ನಾಡಿಗೆ ಟಿಪ್ಪು ಮತ್ತು ಹೈದರಾಲಿ ಕೊಡುಗೆ ಅಪಾರವಾದುದ್ದು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿದ್ದ ಟ್ವೀಟ್ಗೆ ತಿರುಗೇಟು ನೀಡಿರುವ ಬಿಜೆಪಿ, "ಹೈದರಾಲಿ ಮತ್ತು ಟಿಪ್ಪು ಅಪ್ರತಿಮ ದೇಶಪ್ರೇಮಿಗಳು ಎನ್ನುವ ಸಿದ್ದರಾಮಯ್ಯನವರೇ, ವೀರವನಿತೆ ಓಬವ್ವ ಹಾಗೂ ಚಿತ್ರದುರ್ಗದ ಮದಕರಿ ನಾಯಕರಿಗೆ ಯಾವ ಪಟ್ಟಕಟ್ಟುತ್ತೀರಿ? ಟಿಪ್ಪುವನ್ನು ವೈಭವೀಕರಿಸುವ ನಿಮಗೆ ಓಬವ್ವ ಹಾಗೂ ಮದಕರಿ ನಾಯಕನ ಶೌರ್ಯ ಕಾಣಿಸುವುದಿಲ್ಲವೇ?" ಎಂದು ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಸಿದ್ದರಾಮಯ್ಯನವರೇ, "ನೀವು ವೈಭವೀಕರಿಸುವ ಹೈದರಾಲಿ ಹಾಗೂ ಟಿಪ್ಪುವಿನ ಹೇಡಿತನ ಹಾಗೂ ಮೋಸವನ್ನು ಒನಕೆ ಓಬವ್ವ ಆ ಕಾಲದಲ್ಲೇ ಬಯಲು ಮಾಡಿದ್ದಳು. ಚಿತ್ರದುರ್ಗದ ಕೋಟೆ ರಕ್ಷಣೆಗಾಗಿ ಏಕಾಂಗಿಯಾಗಿ ಒನಕೆ ಹಿಡಿದು ಹೋರಾಡಿದ ಈ ಹೆಣ್ಣುಮಗಳ ಶೌರ್ಯಕ್ಕೂ, ಹೈದರಾಲಿ, ಟಿಪ್ಪುವಿನ ಕ್ರೌರ್ಯಕ್ಕೂ ಹೋಲಿಕೆ ಸಾಧ್ಯವೇ?" ಎಂದು ಕೇಳಿದೆ.
"ನಿಮಗೆ ಓಲೈಕೆ ರಾಜಕಾರಣ ಮಾತ್ರ ಮುಖ್ಯ. ಹೀಗಾಗಿ ವೀರಾಗ್ರಣಿ ಒನಕೆ ಓಬವ್ವ ಹಾಗೂ ಮದಕರಿ ನಾಯಕರ ಜಯಂತಿಯ ಬದಲು ಟಿಪ್ಪು ಜಯಂತಿ ಆಚರಿಸಿದಿರಿ. ನೀವೊಬ್ಬ ಹಿಂದು ವಿರೋಧಿ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ" ಎಂದು ಟೀಕಿಸಿದೆ.
"ಟಿಪ್ಪು ಒಬ್ಬ ವೀರ... ! ಇದು ಸಿದ್ದರಾಮಯ್ಯನವರ ವ್ಯಾಖ್ಯಾನ. ಈ ರಣ ಹೇಡಿಯನ್ನು ಚಿತ್ರದುರ್ಗದ ಮದಕರಿನಾಯಕ ಹೆಡೆಮುರಿ ಕಟ್ಟಿದ್ದ ಇತಿಹಾಸ ನಿಮಗೆ ಗೊತ್ತೇ? ಸಿದ್ದರಾಮಯ್ಯ ಅವರೇ, ಚರಿತ್ರೆಯ ಆಯ್ದ ಭಾಗವನ್ನು ಮಾತ್ರ ಓದುವ ಹವ್ಯಾಸ ಒಳ್ಳೆಯದಲ್ಲ" ಎಂದಿದೆ.
"ವೀರವನಿತೆ ಒನಕೆ ಓಬವ್ವ ಜಯಂತಿ ಪ್ರಯುಕ್ತ ಶುಭಾಶಯ ಹೇಳುವುದಕ್ಕೆ ಸಿದ್ದರಾಮಯ್ಯ ಅವರಿಗೆ ಧೈರ್ಯವಿದೆಯೇ? ಸಿದ್ದರಾಮಯ್ಯನವರೇ, ಟಿಪ್ಪು ಜಯಂತಿಯ ಮೋಜಿನಲ್ಲಿ ಚಾಮರಾಜಪೇಟೆಯಲ್ಲಿ ಕಳೆದು ಹೋಗಬೇಡಿ. ಸಿದ್ದರಾಮಯ್ಯನವರೇ, ಇತಿಹಾಸದ ಪುಸ್ತಕ ಓದಿ, ಇತಿಹಾಸ ತಿರುಚಿದವರ ಬರಹವನ್ನಲ್ಲ" ಎಂದು ತಿಳಿಸಿದೆ.
"ಮೈಸೂರು ರಾಜರು, ಮಯೂರ, ಗಂಗರಸರು, ರಾಷ್ಟ್ರಕೂಟರು, ಹೊಯ್ಸಳರು ಮಠಮಂದಿರ ಕಟ್ಟಿ ನಾಡನ್ನು ಸುಭೀಕ್ಷವಾಗಿಟ್ಟಿದ್ದನ್ನು ಏಕೆ ಮರೆ ಮಾಚುವಿರಿ ಸಿದ್ದರಾಮಯ್ಯ? ಟಿಪ್ಪು ಜಯಂತಿಯನ್ನು ಜನ ತಿರಸ್ಕರಿಸಿದರೂ, ಮುಸ್ಲಿಂ ಸಮುದಾಯವೇ ಟಿಪ್ಪು ಜಯಂತಿಯ ಅಗತ್ಯವಿಲ್ಲವೆಂದರೂ ಟಿಪ್ಪುವನ್ನು ಆರಾಧಿಸುತ್ತಿರುವ ಮರ್ಮವೇನು?" ಎಂದು ಪ್ರಶ್ನಿಸಿದೆ.