ನವದೆಹಲಿ, ನ.11 (DaijiworldNews/PY): ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು ಹೊಸ ಪುಸ್ತಕ ಅಯೋಧ್ಯೆ ವರ್ಡಿಕ್ಟ್ನಲ್ಲಿ ಹಿಂದುತ್ವವನ್ನು ಐಸಿಸ್ ಹಾಗೂ ಬೋಕೋ ಹರಾಂ ಭಯೋತ್ಪಾದಕ ಸಂಘಟನೆಗಳೊಂದಿಗೆ ಹೋಲಿಕೆ ಮಾಡಿದ್ದಾರೆ.
ಪುಸ್ತಕದಲ್ಲಿನ ದಿ ಸ್ಯಾಫ್ರಾನ್ ಸ್ಕೈ ಎನ್ನುವ ಅಧ್ಯಾಯದ 113ನೇ ಪುಟದಲ್ಲಿ, "ಸನಾತನ ಧರ್ಮ ಹಾಗೂ ಸಾಂಪ್ರದಾಯಿಕ ಹಿಂದು ಧರ್ಮವು ಋಷಿ, ಮುನಿಗಳಿಂದ ಪ್ರಖ್ಯಾತವಾಗಿತ್ತು. ಆದರೆ, ಹಿಂದುತ್ವಾದವು ಋಷಿ, ಮುನಿಗಳನ್ನು ಮೂಲೆಗುಂಪು ಮಾಡಿ ರಾಜಕೀಯ ಸ್ವರೂಪ ಪಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಇಸ್ಲಾಂ ಜಿಹಾದಿ ಭಯೋತ್ಪಾದಕ ಸಂಘಟನೆಗಳಾದ ಐಸಿಸ್ ಹಾಗೂ ಬೋಕೋ ಹರಾಂ ರೀತಿ ಬದಲಾಗುತ್ತಿದೆ" ಎಂದಿದ್ದಾರೆ.
"ಅಯೋಧ್ಯೆ ರಾಮ ಜನ್ಮಭೂಮಿ ವಿವಾದದ ತೀರ್ಪಿನ ವೇಳೆ ಸುಪ್ರೀಂಕೋರ್ಟ್, ಹಿಂದೂ ರಾಷ್ಟ್ರ ಪರಿಕಲ್ಪನೆಯನ್ನು ತಿರಸ್ಕರಿಸಿದೆ" ಎಂದು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
"ಅಯೋಧ್ಯೆ ರಾಮ ಜನ್ಮಭೂಮಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ಯಾವ ಆಧಾರದ ಮೇಲೆ ಏಕೆ ತೀರ್ಪು ನೀಡಿದೆ ಎನ್ನುವುದು ಯಾರೂ ನೋಡಿಲ್ಲ. ಆದರೆ, ಹಲವು ಮಂದಿ ತಮಗೆ ಬೇಕಾದ ರೀತಿಯಲ್ಲಿ ಸುಪ್ರೀಂ ಕೋರ್ಟ್ನ ತೀರ್ಪಿನ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ" ಎಂದಿದ್ದಾರೆ.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, "ಸಲ್ಮಾನ್ ಖುರ್ಷಿದ್ ಅವರ ಈ ಪುಸ್ತಕವು ಕಾಂಗ್ರೆಸ್ನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಹಿಂದುಗಳನ್ನು ಉಗ್ರ ಸಂಘಟನೆಗಳೊಂದಿಗೆ ಸಮೀಕರಿಸುವ ಮೂಲಕ ಮೂಲಭೂತವಾದಿ ಭಯೋತ್ಪಾದನೆಯನ್ನು ಕಾನೂನುಬದ್ದಗೊಳಿಸುವ ಯತ್ನ ಇದಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.