ನವದೆಹಲಿ, ನ 11 (DaijiworldNews/MS): ಜಾಗತಿಕ ಸಾಂಕ್ರಮಿಕ ರೋಗ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಇಲ್ಲಿವರೆಗೆ ಲಸಿಕೆಗಳು ಮಾತ್ರ ಪ್ರಾಥಮಿಕ ಸಾಧನವಾಗಿತ್ತು. ಆದರೆ ಸಾಂಕ್ರಮಿಕದ ಸನ್ನಿವೇಶಕ್ಕೆ ತಿರುವು ನೀಡಬಲ್ಲ ಎರಡು ಹೊಸ ಆವಿಷ್ಕಾರಗಳು ಶೀಘ್ರದಲ್ಲಿಯೇ ಲಭ್ಯವಾಗಲಿದ್ದು ಇದು ನಿಜಕ್ಕೂ ಕೊವೀಡ್ ವಿಚಾರವಾಗಿ ಗೇಮ್ ಚೇಂಜರ್ಗಳು ಆಗುವ ಸಾಧ್ಯತೆ ಇದೆ.
ಅಮೇರಿಕನ್ ಫಾರ್ಮಾಸ್ಯುಟಿಕಲ್ ದೈತ್ಯ ಫಿಜರ್ನ ಆಂಟಿವೈರಲ್ ಮಾತ್ರೆ ಪ್ಯಾಕ್ಸ್ಲೋವಿಡ್ ಮತ್ತು ಮೆರ್ಕ್ ಶಾರ್ಪ್ ಮತ್ತು ಡೊಹ್ಮ್ನಿಂದ ತಯಾರಿಸಿದ ಮೊಲ್ನುಪಿರಾವಿರ್ ಮಾತ್ರೆಗಳು ಶೀಘ್ರದಲ್ಲಿಯೇ ಜನಸಾಮಾನ್ಯರ ಬಳಕೆಗೆ ದೊರೆಯಲಿದೆ. ಈ ಮಾತ್ರೆಗಳು ಸೌಮ್ಯ ಹಾಗೂ ಮಧ್ಯಮ ಪ್ರಮಾಣದ ಕೊರೊನಾ ವೈರಸ್ ಸೋಂಕಿಗೆ ಚಿಕಿತ್ಸೆ ನೀಡುವ ಮೌಖಿಕ ಆಂಟಿವೈರಲ್ ಔಷಧವಾಗಿದೆ. ಇದಕ್ಕೆ ಭಾರತದಲ್ಲಿ ಕೆಲವೇ ದಿನಗಳಲ್ಲಿ ತುರ್ತು ಬಳಕೆ ಅನುಮೋದನೆ ಸಿಗುವ ಸಾಧ್ಯತೆ ಇದೆ ಎಂದು ಸಿಎಸ್ಐಆರ್ನ ಕೋವಿಡ್ ಸ್ಟ್ರಾಟಜಿ ಗ್ರೂಪ್ನ ಅಧ್ಯಕ್ಷ ಡಾ ರಾಮ್ ವಿಶ್ವಕರ್ಮ ತಿಳಿಸಿದ್ದಾರೆ.
"ಫಿಜರ್ನ ನ ಮತ್ತೊಂದು ಮಾತ್ರೆ, ಪ್ಯಾಕ್ಸ್ಲೋವಿಡ್ ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ನಾವು ಸಾಂಕ್ರಮಿಕವೂ ಸ್ಥಳೀಯರೋಗವಾಗಿ ಬದಲಾಗುವ ಅಂತ್ಯದಲ್ಲಿ ನಾವಿದ್ದು ಈ ಸಂದರ್ಭದಲ್ಲಿ ಕೋವಿಡ್ - 19 ವಿರುದ್ಧದ ಮಾತ್ರೆಗಳು ಲಸಿಕೀಕರಣಕ್ಕಿಂತಲೂ ಬಹಳ ಪ್ರಮುಖ ಪಾತ್ರ ವಹಿಸಲಿವೆ. ಈ ಎರಡೂ ಮಾತ್ರೆಗಳು ಬಹುದೊಡ್ಡ ಬದಲಾವಣೆ ಸೃಷ್ಟಿಸಬಲ್ಲವುಗಳಾಗಿವೆ" ಎಂದು ರಾವ್ ತಿಳಿಸಿದ್ದಾರೆ
"ವಿಜ್ಞಾನದ ಔಷಧಗಳು ಈ ವೈರಸ್ನ ಶವಪೆಟ್ಟಿಗೆಗೆ ಅಂತಿಮ ಮೊಳೆ" ಎಂದು ವರ್ಣಿಸಿದ ಅವರು , "ಮೊಲ್ನುಪಿರವಿರ್ ಈಗಾಗಲೇ ನಮಗೆ ಲಭ್ಯವಾಗಲಿದೆ ಎಂದು ನಾನು ಭಾವಿಸುತ್ತೇನೆ. ಐದು ಕಂಪೆನಿಗಳು ಔಷಧ ತಯಾರಕರ ಜತೆಗೆ ಮಾತುಕತೆ ನಡೆಸುತ್ತಿವೆ. ಹೀಗಾಗಿ ಮುಂದಿನ ಯಾವುದೇ ದಿನದಲ್ಲಿ ಮಾಲ್ನುಪಿರಾವೈರ್ಗೆ ಅನುಮೋದನೆ ಸಿಗಬಹುದು' ಮುಂದಿನ ಒಂದು ತಿಂಗಳೊಳಗೆ, ಮೆರ್ಕ್ ಔಷಧಿಗೆ ಅನುಮೋದನೆಯ ಬಗ್ಗೆ ನಿರ್ಧಾರವಾಗಲಿದೆ " ಎಂದು ರಾಮ್ ವಿಶ್ವಕರ್ಮ ತಿಳಿಸಿದ್ದಾರೆ.
ಭಾರತ ಸರ್ಕಾರವು ಈ ಕಂಪೆನಿಗಳಿಂದ ಬಲ್ಕ್ನಲ್ಲಿ ಖರೀದಿ ಮಾಡಲಿದೆ. ಎರಡು ಬಗೆಯ ದರ ವ್ಯವಸ್ಥೆ ಇರಲಿದೆ. ಪ್ರಾರಂಭದಲ್ಲಿ ಒಂದು ಚಿಕಿತ್ಸೆಯ 2,000 ರೂಪಾಯಿಯಿಂದ 3,000 ರೂ ಅಥವಾ 4,000 ರೂ ತಗುಲಬಹುದು. ಬಳಿಕ ಅದು 500-600 ರೂ ಅಥವಾ 1,000 ರೂಪಾಯಿಗೆ ಇಳಿಯಬಹುದು ಎಂದು ರಾಮ್ ವಿಶ್ವಕರ್ಮ ತಿಳಿಸಿದ್ದಾರೆ.
ಕ್ಲಿನಿಕಲ್ ಪ್ರಯೋಗದ ಪ್ರಕಾರ, ಅದರ ಪ್ಯಾಕ್ಸ್ಲೋವಿಡ್ ದುರ್ಬಲ ವಯಸ್ಕರಲ್ಲಿ ಆಸ್ಪತ್ರೆಗೆ ದಾಖಲಾಗುವ ಅಥವಾ ಸಾವಿನ ಅಪಾಯವನ್ನು ಶೇಕಡಾ 89 ರಷ್ಟು ಕಡಿತಗೊಳಿಸುತ್ತದೆ ಎಂದು ಫಿಜರ್ ಹೇಳಿದೆ.