ಬೆಂಗಳೂರು, ನ.11 (DaijiworldNews/HR): "ಬಿಟ್ ಕಾಯಿನ್ ಹಗರಣದ ಪ್ರಮಾಣದ ಕುರಿತು ಲೆಕ್ಕ ಹಾಕಲು ನನಗೆ ಸಾಧ್ಯವಾಗುತ್ತಿಲ್ಲ. ಅದರ ಅಂಕಿ-ಅಂಶಗಳನ್ನು ನೋಡಿದರೆ ಮೂರ್ಛೆ ಬೀಳಬಹುದು ಎಂದು ಸುಮ್ಮನಿದ್ದೇನೆ" ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಹಗರಣದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರ ಮಗ ಭರತ್ ಬೊಮ್ಮಾಯಿ ಹೆಸರು ಕೇಳಿ ಬರುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಯಾರ ಮಕ್ಕಳ ಹೆಸರು ಕೇಳಿ ಬರುತ್ತದೆಯೋ ಬರಲಿ. ನಾನು ದಾಖಲೆ ಇಲ್ಲದೇ ಬೇರೆಯವರಂತೆ ಬೇಕಾಬಿಟ್ಟಿ ಮಾತನಾಡಲು ಸಾಧ್ಯವಿಲ್ಲ" ಎಂದರು.
"ನಾನು ಅಧಿಕಾರದಲ್ಲಿಲ್ಲ. ಅಧಿಕಾರದಲ್ಲಿದ್ದಿದ್ದರೆ ಬಿಟ್ ಕಾಯಿನ್ ಹಗರಣದ ಬಗ್ಗೆ ಇಷ್ಟು ಹೊತ್ತಿಗೆ ಎಲ್ಲ ಮಾಹಿತಿ ಬಹಿರಂಗಪಡಿಸುತ್ತಿದ್ದೆ. ಕಾಂಗ್ರೆಸ್ ನಾಯಕರ ಮಗನ ವಿಚಾರ ಮಾತನಾಡುವುದಾದರೆ, ಆತ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಆತನನ್ನು ಬಂಧಿಸಲಿ. ಯಾವ ಆಧಾರದ ಮೇಲೆ ಕಾಂಗ್ರೆಸ್ ನಾಯಕರ ಮಕ್ಕಳ ಹೆಸರು ತರುತ್ತಿದ್ದಾರೆ. ತಪ್ಪು ಮಾಡಿದವರನ್ನು ಸುಮ್ಮನೆ ಬಿಡುವುದೇಕೆ? ಈ ಎಲ್ಲ ಮಾಹಿತಿಗಳನ್ನು ಜನರ ಮುಂದೆ ಬಹಿರಂಗ ಪಡಿಸಲಿ" ಎಂದಿದ್ದಾರೆ.
ಇನ್ನು ಪ್ರಕರಣದ ತನಿಖೆಯಾಗಿದೆ. ಇದನ್ನು ಇಡಿಗೆ ಹಸ್ತಾತರಿಸಲಾಗಿದೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದು, ಅವರು ನಡೆಸಿರುವ ತನಿಖೆ ಏನು? ಸಿಕ್ಕಿರುವ ಮಾಹಿತಿ ಏನು? ಏನೆಲ್ಲಾ ಸೀಜ್ ಮಾಡಿದ್ದಾರೆ? ಸೀಜ್ ಮಾಡಿಕೊಂಡ ಬಿಟ್ ಕಾಯಿನ್ ಯಾರ ವಾಲೆಟ್ನಲ್ಲಿದೆ? ಇ.ಡಿ ತನಿಖೆ ಸಂಬಂಧ ಪ್ರಧಾನಿಗಳಿಗೆ ಪತ್ರ ಬರೆದಿದ್ದು ಯಾರು? ಎಂಬ ಎಲ್ಲಾ ಮಾಹಿತಿಯನ್ನು ಸರ್ಕಾರವು ಮೊದಲು ನೀಡಲಿ" ಎಂದು ಒತ್ತಾಯಿಸಿದ್ದಾರೆ.