ದಾವಣಗೆರೆ, ನ.11 (DaijiworldNews/PY): "ಸಿಎಂ ಬಸವರಾಜ ಬೊಮ್ಮಾಯಿ ಅವರ ಬದಲಾವಣೆ ಕೈ ನಾಯಕರ ಪಿತೂರಿಯಷ್ಟೆ" ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, "ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿಯಿದೆ. ಅಲ್ಲಿಯವರೆಗೂ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಕಾಂಗ್ರೆಸ್, ಆಡಳಿತ ಕುಂಠಿತ ಮಾಡಲು ಯತ್ನಿಸುತ್ತಿದೆ. ಕೈ ನಾಯಕರು ರಾಜ್ಯದ ಜನರ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸಿಎಂ ಬದಲಾವಣೆ ವಿಚಾರ ಕಪೋಲಕಲ್ಪಿತ" ಎಂದಿದ್ದಾರೆ.
ಬಿಟ್ ಕಾಯಿನ್ ಪ್ರಕರಣದ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, "ಬಿಟ್ ಕಾಯಿನ್ ಪ್ರಕರಣ 3-4 ವರ್ಷ ಹಿಂದಿನದ್ದು. ಈ ಪ್ರಕರಣ ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ನಂತರ ನಡೆದ ಘಟನೆಯಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಪ್ರಕರಣದ ತನಿಖೆಯ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ತನಿಖೆ ನಡೆದ ಬಳಿಕ ತಪ್ಪು ಯಾರು ಮಾಡಿದ್ದಾರೆ ಎಂದು ತಿಳಿಯಲಿದೆ" ಎಂದು ಹೇಳಿದ್ದಾರೆ.
"ಬಿಟ್ ಕಾಯಿನ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಕಾಂಗ್ರೆಸ್ ಮುಖಂಡರೇ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ" ಎಂದು ತಿಳಿಸಿದ್ದಾರೆ.