ಕರೀಂಗಂಜ್, ನ 11 (DaijiworldNews/MS): ಅಸ್ಸಾಂ-ತ್ರಿಪುರಾ ಗಡಿಯಲ್ಲಿ ಅಟೋರಿಕ್ಷಾಕ್ಕೆ ಸಿಮೆಂಟ್ ಲಾರಿ ಢಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಹತ್ತು ಜನ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.
ಅಸ್ಸಾಂನ ಕರೀಂಗಂಜ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 8 ರಲ್ಲಿ ಆಟೋರಿಕ್ಷಾ10 ಜನ ಭಕ್ತಾದಿಗಳು ಪ್ರಯಾಣಿಸುತ್ತಿದ್ದರು . ಈ ಆಟೋರಿಕ್ಷಾಕ್ಕೆ ಸಿಮೆಂಟ್ ಟ್ರಕ್ ಢಿಕ್ಕಿ ಹೊಡೆದ ಪರಿಣಾಮ ಒಂಬತ್ತು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಓರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಇಂದು ತಿಳಿಸಿದ್ದಾರೆ.
"ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರಾಗಿದ್ದಾರೆ. ಇವರೆಲ್ಲರೂ ಛತ್ ಪೂಜೆ ಮುಗಿಸಿ ಆಟೋರಿಕ್ಷಾದಲ್ಲಿ ತಮ್ಮ ಮನೆಗೆ ಹಿಂತಿರುಗುತ್ತಿದ್ದರು. ವಿರುದ್ಧ ದಿಕ್ಕಿನಿಂದ ಬಂದ ಟ್ರಕ್ ಆಟೋ-ರಿಕ್ಷಾಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಒಂಬತ್ತು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಓರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಕರೆದೊಯ್ದ ವ್ಯಕ್ತಿ ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಮೃತರಲ್ಲಿ ಮೂವರು ಪುರುಷರು, ಐವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದ್ದಾರೆ. ಟ್ರಕ್ ಚಾಲಕ ಅಪಾಯಕಾರಿ ವೇಗದಲ್ಲಿ ಚಾಲನೆ ಮಾಡುತ್ತಿದ್ದು, ಎದುರಿನಿಂದ ಬರುತ್ತಿದ್ದ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ವಾಹನವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ" ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
"ಅಪಘಾತದ ನಂತರ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆತನನ್ನು ಬಂಧಿಸಲು ನಮ್ಮ ಶೋಧ ಕಾರ್ಯಾಚರಣೆ ನಡೆಯುತ್ತಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.