ಬೆಂಗಳೂರು, ನ.11 (DaijiworldNews/HR): ಕರ್ತವ್ಯದ ವೇಳೆ ಮದ್ಯಪಾನ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಫ್ಲಾಟ್ ಮಾಲೀಕನ ಮೇಲೆ ಸೆಕ್ಯೂರಿಟಿ ಗಾರ್ಡ್ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ಕಟ್ಟಡವೊಂದರಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತರನ್ನು ಭಾಸ್ಕರ್ ರೆಡ್ಡಿ (65) ಎಂದು ಗುರುತಿಸಲಾಗಿದೆ.
ಆರೋಪಿ ಭದ್ರತಾ ಸಿಬ್ಬಂದಿ ನೇಪಾಳ ಮೂಲದ ಬಸಂತ್ ಆಗಿದ್ದು, ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಫ್ಲಾಟ್ ಮಾಲೀಕ ಭಾಸ್ಕರ್ ರೆಡ್ಡಿ ಅವರು ಬಸಂತನು ಕುಡಿಯುತ್ತಿದ್ದುದನ್ನು ಕಂಡು ಅದನ್ನು ವಿರೋಧಿಸಿದ್ದು, ಕರ್ತವ್ಯದ ಸಮಯದಲ್ಲಿ ಮದ್ಯಪಾನ ಮಾಡದಂತೆ ಎಚ್ಚರಿಕೆ ನೀಡಿದರು. ಸೆಕ್ಯುರಿಟಿ ಗಾರ್ಡ್ ತನ್ನ ಅಭ್ಯಾಸವನ್ನು ಬದಲಾಯಿಸದ ಕಾರಣ ಅವರು ಅಪಾರ್ಟ್ಮೆಂಟ್ಗಳ ಸಂಘಕ್ಕೂ ಈ ಬಗ್ಗೆ ದೂರು ನೀಡಿದ್ದರು. ಈ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಬೆಳಗ್ಗೆ ರೆಡ್ಡಿ ಪಾರ್ಕಿಂಗ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಬಸಂತ್ ಅವರ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ.