ಬೆಂಗಳೂರು, ನ.11 (DaijiworldNews/PY): ಟಿಪ್ಪು ಜಾತ್ಯಾತೀತ ದೊರೆ ಹಾಗೂ ಒಬ್ಬ ಜನನಾಯಕ ಆಗಿದ್ದ. ಇತಿಹಾಸ ಪುರುಷರನ್ನು ಧರ್ಮದ ಆಧಾರದ ಮೇಲೆ ದ್ವೇಷಿಸುವ ಆರ್.ಎಸ್.ಎಸ್ನವರ ಮಾತುಗಳಿಗೆ 'ಐ ಡೋಂಟ್ ಕೇರ್' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಟಿಪ್ಪು ಜಯಂತಿ ಪ್ರಯುಕ್ತ ಶುಭಕೋರಲು ಮಾಜಿ ಸಚಿವ ಜಮೀರ್ ಅಹಮದ್ ನೇತೃತ್ವದಲ್ಲಿ ತಮ್ಮ ನಿವಾಸಕ್ಕೆ ಮುಸ್ಲಿಂ ಮುಖಂಡರು ಆಗಮಿಸಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, "ಟಿಪ್ಪು ಜಾತ್ಯಾತೀತ ದೊರೆ ಹಾಗೂ ಒಬ್ಬ ಜನನಾಯಕ ಆಗಿದ್ದ. ಟಿಪ್ಪು ಒಬ್ಬ ಹಿಂದೂ ವಿರೋಧಿಯಾಗಿದ್ದರೆ ತನ್ನ ಆಸ್ಥಾನದಲ್ಲಿ ಹಿಂದೂಗಳನ್ನು ದೀವಾನರಾಗಿ, ಮಂತ್ರಿಗಳಾಗಿ ಇಟ್ಟುಕೊಳ್ಳುತ್ತಿದ್ದನೇ?. ಉಳುವವನೇ ಭೂಮಿಯ ಒಡೆಯ ಕಾನೂನನ್ನು ಮೊದಲಿಗೆ ಜಾರಿಗೆ ತಂದಿದ್ದು ಹೈದರಾಲಿ. ಕನ್ನಂಬಾಡಿ ಕಟ್ಟೆಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್. ಹೀಗೆ ನಾಡಿಗೆ ಟಿಪ್ಪು ಮತ್ತು ಹೈದರಾಲಿ ಕೊಡುಗೆ ಅಪಾರವಾದುದ್ದು" ಎಂದಿದ್ದಾರೆ.
"ಟಿಪ್ಪು ಎಲ್ಲೆಲ್ಲಿ ಮಸೀದಿ ಕಟ್ಟಿಸಿದ್ದರೋ ಅದರ ಪಕ್ಕದಲ್ಲೇ ದೇವಸ್ಥಾನಗಳನ್ನೂ ಕಟ್ಟಿಸುತ್ತಿದ್ದರು ಎನ್ನುವುದಕ್ಕೆ ದಾಖಲೆಗಳಿವೆ. ಧರ್ಮದ ಕಾರಣಕ್ಕೆ ಟಿಪ್ಪುವನ್ನು ವಿರೋಧಿಸುವ ಆರ್ಎಸ್ಎಸ್ ಎಂದಾದರೂ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದೆಯೇ? ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಯಾರಾದರೂ ಆರ್ಎಸ್ಎಸ್ ನವರು ಪ್ರಾಣ ಬಿಟ್ಟ ಉದಾಹರಣೆಗೆ ಇದೆಯಾ?" ಎಂದು ಪ್ರಶ್ನಿಸಿದ್ದಾರೆ.
"ಕೆಂಪೇಗೌಡ ಜಯಂತಿ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ಟಿಪ್ಪು ಜಯಂತಿ ಆಚರಣೆ ಆರಂಭಿಸಿದ ಹೆಮ್ಮೆ ನಮ್ಮ ಸರ್ಕಾರದ್ದು. ಭಾರತೀಯರಾದ ನಾವು ದೇಶವನ್ನು ದಾಸ್ಯಕ್ಕೆ ದೂಡಿದ ಬ್ರಿಟಿಷರ ಪರವಾಗಿ ಇರಬೇಕೋ? ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಲು ಹೋರಾಡಿದ ಟಿಪ್ಪು ಸುಲ್ತಾನ್ ಪರವಾಗಿ ಇರಬೇಕೋ?" ಎಂದು ಕೇಳಿದ್ದಾರೆ.
"ಬಿಟ್ ಕಾಯಿನ್ ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಟ್ ಕಾಯಿನ್ ಹಗರಣದಲ್ಲಿ ಸದ್ದಿಲ್ಲದೆ ಹಣ ತಿಂದ ಅಧಿಕಾರಿಗಳ ಮತ್ತು ರಾಜಕಾರಣಿಗಳ ಹೆಸರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಹಿರಂಗಪಡಿಸಬೇಕು ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾವು ಜಾರಿಕೊಳ್ಳಲು ಹಗರಣದಲ್ಲಿ ಕಾಂಗ್ರೆಸ್ ನಾಯಕರ ಹೆಸರೂ ಇದೆ ಎಂದು ಹಾರಿಕೆ ಉತ್ತರ ನೀಡುವುದು ನಿಲ್ಲಿಸಿ, ಕಾಂಗ್ರೆಸ್ಸಿನವರ ಹೆಸರಿದ್ದರೆ ಅವರ ಹೆಸರನ್ನೂ ಹೇಳಲಿ, ಅವರನ್ನೂ ಬಂಧಿಸಲಿ, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಿ" ಎಂದಿದ್ದಾರೆ.
"ದೇಶದಲ್ಲಿ ಅತಿ ಹೆಚ್ಚು ಮಂದಿ ದಲಿತರು ಮುಖ್ಯಮಂತ್ರಿಗಳಾಗಿರುವ ಚರಿತ್ರೆ ಮತ್ತು ವರ್ತಮಾನ ಇರುವುದು ಕಾಂಗ್ರೆಸ್ಸಿಗೆ ಮಾತ್ರ. ಬಿಜೆಪಿ ಪಕ್ಷದಲ್ಲಿ ಯಾರೂ ದಲಿತರೇ ಇಲ್ಲವೇ? ಬಿಜೆಪಿಗೆ ದಲಿತರ ಬಗ್ಗೆ ನಿಜವಾಗಿ ಕಾಳಜಿ ಇದ್ದರೆ ಬೊಮ್ಮಾಯಿ ಅವರನ್ನು ಕೆಳಗಿಳಿಸಿ ದಲಿತರನ್ನು ಮುಖ್ಯಮಂತ್ರಿ ಮಾಡಲಿ. ಕಾಂಗ್ರೆಸ್ ಸರ್ಕಾರ ಇರುವ ಪಂಜಾಬ್ನಲ್ಲಿ ನಾವು ದಲಿತರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಹೀಗಾಗಿ ಬಿಜೆಪಿಯವರಿಗೆ ದಲಿತರನ್ನು ಮುಖ್ಯಮಂತ್ರಿ ಮಾಡಲು ಈಗಲೂ ಅವಕಾಶ ಇದೆ. ಇನ್ನಾದರೂ ನಾಟಕ ನಿಲ್ಲಿಸಿ, ದಲಿತರನ್ನು ಮುಖ್ಯಮಂತ್ರಿ ಮಾಡಲಿ" ಎಂದು ಹೇಳಿದ್ದಾರೆ.