ಬೆಂಗಳೂರು, ನ.10 (DaijiworldNews/PY): "ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ಮೊದಲು ಬಂಧಿಸಿ, ತನಿಖೆಗೆ ಒಳಪಡಿಸಿ. ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳುತ್ತಿರುವುದು ಕೇಳಿದರೆ ನನಗೆ ಸಿಎಂ ಬಗ್ಗೆ ಅನುಮಾನ ಬರುತ್ತಿದೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ನಾಯಕರು ಬಿಟ್ ಕಾಯಿನ್ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಯಾರೆ ಭಾಗಿಯಾಗಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಲಿ. ಈ ಪ್ರಕರಣದಲ್ಲಿ ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ಯಾವ ನಾಯಕರೇ ಭಾಗಿಯಾಗಿರಲಿ ಅವರನ್ನು ಬಂಧಿಸಲಿ" ಎಂದಿದ್ದಾರೆ.
"ಮೊದಲು ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಲಿ. ಒಂದು ವೇಳೆ ಹೇಳದೇ ಇದ್ದಲ್ಲಿ ನಾವೇ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ಹೇಳುತ್ತೇವೆ. ಹೆಸರನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸುತ್ತೇವೆ" ಎಂದು ಹೇಳಿದ್ದಾರೆ.
"ಯಾರನ್ನೂ ಕೂಡಾ ನಾವು ಬ್ಲ್ಯಾಕ್ ಮೇಲ್ ಮಾಡುತ್ತಿಲ್ಲ. ಇದಲ್ಲಿ ಕಾಂಗ್ರೆಸ್ಸಿಗರು ಶಾಮೀಲಾಗಿದ್ದರೆ ಈ ಕುರಿತು ತನಿಖೆಯಾಗಲಿ. ಸುಖಾಸುಮ್ಮನೆ ನಮ್ಮ ವಿರುದ್ದ ಆರೋಪ ಮಾಡಿ ಹೇಳಿಕೆ ನೀಡುವ ಬದಲು ಪ್ರಕರಣದ ಬಗ್ಗೆ ತನಿಖೆ ನಡೆಸಲಿ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಿ" ಎಂದು ಆಗ್ರಹಿಸಿದ್ದಾರೆ.