ನವದೆಹಲಿ, ನ.10 (DaijiworldNews/PY): ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು 10 ಸಾವಿರ ರೂ. ಗೌರವಧನ ನೀಡುವುದಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಆಶಾ ಕಾರ್ಯಕರ್ತೆಯರ ಕೆಲಸವನ್ನು ಉತ್ತರ ಪ್ರದೇಶ ಸರ್ಕಾರ ಅವಮಾನಿಸುತ್ತಿದೆ" ಎಂದಿದ್ದಾರೆ.
ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಲು ಬಯಸಿದ್ದ ಆಶಾ ಕಾರ್ಯಕರ್ತರ ಮೇಲೆ ಶಹಜಹಾನ್ಪುರದಲ್ಲಿ ಪೊಲೀಸರು ಹಲ್ಲೆ ನಡೆಸಿದ ವಿಡಿಯೋ ತುಣುಕನ್ನು ಟ್ಯಾಗ್ ಮಾಡಿದ್ದಾರೆ.
"ಆಶಾ ಕಾರ್ಯಕರ್ತೆಯರು ಕೊರೊನಾ ಸೇರಿದಂತೆ ಇತರ ಸಂದರ್ಭಗಳಲ್ಲಿ ತಮ್ಮ ಸೇವೆಯನ್ನು ಶ್ರದ್ದೆಯಿಂದ ಮಾಡಿದ್ದಾರೆ. ಗೌರವಧನವನ್ನು ಹೆಚ್ಚಳ ಮಾಡುವಂತೆ ಕೇಳುವುದು ಅವರ ಹಕ್ಕು. ಅವರ ಬೇಡಿಕೆಯನ್ನು ಈಡೇರಿಸುವುದು ಸರ್ಕಾರದ ಕರ್ತವ್ಯ. ಅವರು ಗೌರವಕ್ಕೆ ಅರ್ಹರು ಈ ಹೋರಾಟದಲ್ಲಿ ಅವರೊಂದಿಗೆ ನಾನಿದ್ದೇನೆ" ಎಂದಿದ್ದಾರೆ.