ಮಹಾರಾಷ್ಟ್ರ, ನ.10 (DaijiworldNews/PY): ಕಡು ಬಡತನದಿಂದ ಕಂಗೆಟ್ಟಿದ್ದ 32 ವರ್ಷದ ಮಹಿಳೆ ತನ್ನ 3 ದಿನಗಳ ಹಸುಗೂಸನ್ನು 1.78 ಲಕ್ಷ ರೂ. ಗೆ ಮಾರಾಟ ಮಾಡಿದ ಘಟನೆ ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ಶಿರಡಿ ಪಟ್ಟಣದಲ್ಲಿ ನಡೆದಿದೆ.
ದೊಂಬಿವಿಲಿ ಪಟ್ಟಣದ ಮಾನ್ಪಾಡಾ ಠಾಣಾ ಪೊಲೀಸರು ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆ, ಮಗುವನ್ನು ಖರೀದಿಸಿದ ವ್ಯಕ್ಕತಿ ಹಾಗೂ ಅಪರಾಧದಲ್ಲಿ ಮಹಿಳೆಗೆ ಸಹಾಯ ಮಾಡಿದ ಇತರೆ ನಾಲ್ವರನ್ನು ಬಂಧಿಸಿದ್ದಾರೆ.
ಈ ಕುರಿತು ಮನ್ಪಡಾ ಪೊಲೀಸ್ ಠಾಣೆ ಅಧಿಕಾರಿ ಮಾಹಿತಿ ನೀಡಿದ್ದು, "ಮಹಿಳೆ ಸೆಪ್ಟೆಂಬರ್ ತಿಂಗಳಿನಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಆದರೆ, ಕುಟುಂಬದ ಆರ್ಥಿಕ ಸಂಕಷ್ಟದ ಕಾರಣದಿಂದ ಮಗುವನ್ನು ಸಾಕುವುದು ಕಷ್ಟ ಎನ್ನುವ ಕಾರಣಕ್ಕೆ ಮಹಿಳೆ ಮಗುವನ್ನು ಮಾರಾಟ ಮಾಡಿದ್ದಾಳೆ. ದಿನಗಳ ಹಿಂದೆಯಷ್ಟೇ ಈ ಪ್ರಕರಣ ಬೆಳಕಿಗೆ ಬಂದಿದೆ" ಎಂದಿದ್ದಾರೆ.
ಮಹಿಳೆಯು ಮಗು ಮಾರಾಟಕ್ಕಾಗಿ ಗ್ರಾಹಕರನ್ನು ಹುಡುಕುತ್ತಿದ್ದ ಸಂದರ್ಭ ಕಲ್ಯಾಣ್, ಅಹಮದ್ನಗರ ಹಾಗೂ ಮುಂಬೈನಲ್ಲಿ ವಾಸವಿದ್ದ ಮೂವರು ಮಹಿಳೆಯರು ಸಹಾಯ ಮಾಡಿದ್ದರು ಎನ್ನಲಾಗಿದೆ. ಗ್ರಾಹಕ ಸಿಕ್ಕ ಬಳಿಕ ಯಾವುದೇ ರೀತಿಯಾದ ಕಾನೂನು ಕ್ರಮ ಕೈಗೊಳ್ಳದೆಯೇ ಮಗುವನ್ನು ಮಾರಾಟ ಮಾಡಿದ್ದಾರೆ.