ರಾಜಸ್ತಾನ, ನ.10 (DaijiworldNews/PY): ಬಸ್ಸಿಗೆ ಟ್ಯಾಂಕರ್ವೊಂದು ಢಿಕ್ಕಿ ಹೊಡೆದ ಪರಿಣಾಮ ಬಸ್ಸಿಗೆ ಬೆಂಕಿ ಹತ್ತಿಕೊಂಡು 12 ಮಂದಿ ಸಜೀವ ದಹನಗೊಂಡ ಘಟನೆ ರಾಜಸ್ತಾನದ ಬಾರ್ಮರ್-ಜೋಧ್ಪುರ ಹೆದ್ದಾರಿಯಲ್ಲಿ ನಡೆದಿದೆ.
ಬಸ್ನಲ್ಲಿ ಸುಮಾರು 25 ಮಂದಿ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ರಕ್ಷಣ ಸಿಬ್ಬಂದಿಗಳು ಬಸ್ಸಿನಲ್ಲಿದ್ದ 10 ಮೃತದೇಹಗಳನ್ನು ಹೊರತೆಗದಿದ್ದಾರೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ.
ಬಸ್ಗೆ ಟ್ಯಾಂಕರ್ ಗುದಿದ್ದ ರಭಸಕ್ಕೆ ಬಸ್ನಲ್ಲಿದ್ದ ಪ್ರಯಾಣಿಕರು ಹೊರಬರಲಾಗಲಿಲ್ಲ. ಈ ಸಂದರ್ಭ ಬಸ್ಗೆ ಬೆಂಕಿ ಆವರಿಸಿಕೊಂಡಿದ್ದು, ಸಾವಿನ ಸಂಖ್ಯೆ ಏರಿಕಯಾಗಿದೆ. ಈ ಸಂದರ್ಭ ಕೆಲವು ಮಂದಿ ಕಿಟಕಿ ಗಾಜು ಒಡೆದು ಹೊರಕ್ಕೆ ಜಿಗಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಣೆ ಮಾಡಿದ್ದಾರೆ.