ನವದೆಹಲಿ, ನ 10 (DaijiworldNews/MS): ಬಿಟ್ ಕಾಯಿನ್ ದಂಧೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ಹೆಸರು ಇದ್ದು , ಹೀಗಾಗಿ ಮೊದಲು ಕಾಂಗ್ರೆಸ್ ನಾಯಕರು ಆ ಬಗ್ಗೆ ಚಿಂತನೆ ಮಾಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಬಿಟ್ ಕಾಯಿನ್ ಕೇಸ್ ನಲ್ಲಿ ಸಿಎಂ ಬಲಿಯಾಗುತ್ತಾರೆ ಎಂಬ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ ನವದೆಹಲಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಪಾಪ ಪ್ರಿಯಾಂಕ್ ಖರ್ಗೆ ಸಂಪೂರ್ಣವಾಗಿ ಮಾಹಿತಿ ಪಡೆದು ಮಾತನಾಡಲಿ. ಬಿಟ್ ಕಾಯಿನ್ ದಂಧೆಯಲ್ಲಿ ಕಾಂಗ್ರೆಸ್ ನಾಯಕರ ಹೆಸರಿದೆ. ಈ ಬಗ್ಗೆ ಈಗಾಗಲೇ ನಾನು ಹೇಳಿದ್ದೇನೆ. ಕಾಂಗ್ರೆಸ್ ನವರು ಮೊದಲು ಅವರ ನಾಯಕರ ಬಗ್ಗೆ ಚಿಂತನೆ ನಡೆಸಲಿ. ಹೀಗಾಗಿ ಪ್ರಿಯಾಂಕ್ ಖರ್ಗೆ ಮಾತಿಗೆಲ್ಲ ನಾನು ರಿಯಾಕ್ಟ್ ಮಾಡಲ್ಲ ಎಂದಿದ್ದಾರೆ.
ಮುಂದುವರಿಸಿ ಮಾತನಾಡಿದ ಅವರು, ಬಿಟ್ ಕಾಯಿನ್ ದಂಧೆ, ಡ್ರಗ್ಸ್ ದಂಧೆಯ ವಿರುದ್ಧ ಸಮರ ಸಾರಿದ್ದೇ ಬಿಜೆಪಿ ಸರ್ಕಾರ, ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಿಟ್ ಕಾಯಿನ್ ದಂಧೆಯ ಆರೋಪಿಗಳನ್ನು ರಕ್ಷಿಸಿತ್ತು ಎಂದು ಆರೋಪಿದ್ದಾರೆ
ಬಿಟ್ ಕಾಯಿನ್ ಹಗರಣಾದಲ್ಲಿ ಮುಖ್ಯಮಂತ್ರ ಬೊಮ್ಮಾಯಿ ಬಲಿ ಪಡೆಯಲಿದೆ. ಸೂಕ್ತವಾಗಿ ತನಿಖೆ ನಡೆಸಿದರೆ ಸರ್ಕಾರದಲ್ಲಿರುವ ಬಿಜೆಪಿ ಪ್ರಭಾವಿ ನಾಯಕರ ಹೆಸರು ಬಹಿರಂಗವಾಗಲಿದೆ. ಬಿಟ್ ಕಾಯಿನ್ ಕೇಸ್ ನಲ್ಲಿ ಬಿಜೆಪಿಯವರು ಭಾಗಿಯಾಗಿದ್ದಾರೆ. ನಮ್ಮ ಬಳಿ ದಾಖಲೆಗಳಿವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದರು.