ಶಿವಮೊಗ್ಗ, ನ 10 (DaijiworldNews/MS): ರಾಜ್ಯದ ಅತಿದೊಡ್ಡ ಆನೆಗಳ ಬಿಡಾರ ಎಂಬ ಖ್ಯಾತಿಗೆ ಪಾತ್ರವಾದ ಸಕ್ರೆಬೈಲುವಿನ ಶಿಬಿರದಲ್ಲಿದ್ದ ಆನೆ ಮರಿಯೊಂದಕ್ಕೆ ಅರಣ್ಯ ಇಲಾಖೆಯೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದು ನಾಮಕರಣ ಮಾಡಿದೆ.
ಅರಣ್ಯ ಇಲಾಖೆಯೂ ಶಿಬಿರದಲ್ಲಿದ್ದ ಅನೆ ಮರಿಗಳಿಗೆ ಇದುವರೆಗೆ ದೇವರ ಹೆಸರು ಹಾಗೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಹೆಸರನ್ನು ಮಾತ್ರ ಬಳಸಿ ನಾಮಕರಣ ಮಾಡಲಾಗುತ್ತಿತ್ತು . ಆದರೆ ಮೊತ್ತ ಮೊದಲ ಬಾರಿಗೆ ಈ ಶಿಷ್ಟಾಚಾರವನ್ನು ಬದಿಗಿರಿಸಿದ ಅರಣ್ಯ ಇಲಾಖೆ ಈ ಬಾರಿ ಮುದ್ದಾದ ಆನೆ ಮರಿಗೆ ಅಗಲಿದ ಸ್ಯಾಂಡಲ್ ವುಡ್ ನಟ ಪುನೀತ್ ಅವರ ಗೌರವಾರ್ಥ ನಟನ ಹೆಸರಿರಿಸಿದೆ. ಹೀಗಾಗಿ ಇದೇ ಮೊದಲ ಬಾರಿಗೆ ಮರಿ ಆನೆಗೆ ಚಿತ್ರನಟರೊಬ್ಬರ ಹೆಸರನ್ನು ಇಟ್ಟಂತಾಗುತ್ತಿದೆ. ಎರಡು ತಿಂಗಳ ಹಿಂದಷ್ಟೇ ಸಕ್ರೆಬೈಲು ಆನೆ ಬಿಡಾರಕ್ಕೆ ಆಗಮಿಸಿದ್ದ ಪುನೀತ್ ರಾಜ್ ಕುಮಾರ್ ಈ ಮರಿಯನ್ನು ಮುದ್ದಿಸಿದ್ದರು. ಹೀಗಾಗಿ ಮರಿ ಆನೆಗೆ ಪುನೀತ್ ಹೆಸರನ್ನಿಡುವ ಮೂಲಕ ಅರಣ್ಯ ಇಲಾಖೆಯೂ ಪುನೀತ್ ಅವರಿಗೆ ವಿಶೇಷ ಗೌರವ ಸಲ್ಲಿಸಿದೆ.
ವೀನಿಂಗ್ ಕಾರ್ಯಕ್ರಮದಲ್ಲಿ ನಾಮಕರಣ:
ಸಕ್ರೆಬೈಲು ಆನೆ ಬಿಡಾರದಲ್ಲಿ ನಡೆಯುತ್ತಿರುವ ತಾಯಿ ಆನೆಯಿಂದ ಮರಿಯಾನೆಯನ್ನು ಬೇರ್ಪಡಿಸುವ ವೀನಿಂಗ್ ಕಾರ್ಯಕ್ರಮ ಇಂದುತಾಯಿ ನೇತ್ರಾ ಆನೆಯಿಂದ ಮರಿಯನ್ನು ಇಂದು ಬೇರ್ಪಡಿಸಲಾಗುತ್ತಿದೆ.ಇದೇ ವೇಳೆ ತಾಯಿಯಿಂದ ಬೇರ್ಪಡುತ್ತಿರುವ ಮರಿ ಆನೆಗೆ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನಿರಿಸಿ ವಿಶೇಷ ಗೌರವದ ಮೂಲಕ ಸ್ಮರಿಸಲಾಗುತ್ತಿದೆ.