ಮಲಪ್ಪುರಂ.ನ 10 (DaijiworldNews/MS): ದಿನದಿಂದ ದಿನಕ್ಕೆ ಕಳ್ಳತನ, ದರೋಡೆಗಳು ಪ್ರಕರಣಗಳು ಹೆಚ್ಚಾಗುತ್ತಿದೆ. ಹಗಲು ಕಣ್ಣುಹಾಯಿಸಿ ರಾತ್ರಿ ವೇಳೆ ಕಳ್ಳರು ಕೈಚಳಕ ತೋರಿಸುವ ಅನೇಕ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಆದರೆ ಇಲ್ಲೊಬ್ಬ ಕಳ್ಳ ಮನೆಯಲ್ಲಿದ್ದ ಹಣ ಎಗರಿಸಿದ್ದು ಮಾತ್ರವಲ್ಲದೇ ಶೀಘ್ರವೇ ಹಣ ಮರಳಿಸುತ್ತೇನೆಂದು ಬರೆದ ಪತ್ರವನ್ನು ಬಿಟ್ಟು ಹೋಗಿದ್ದಾನೆ. ಈ ವಿಚಿತ್ರ ಘಟನೆ ಕೇರಳ ಮಲಪ್ಪುರಂನ ಎಡಪ್ಪಲ್ ಚಂಗರಂಕುಲಂ ಪೊಲೀಸ್ ಠಾಣಾ ವ್ಯಾಪ್ತಿಯ ಶಂಸೀರ್ ಎಂಬುವವರ ಮನೆಯಲ್ಲಿ ನಡೆದಿದೆ.
ಪತ್ರದಲ್ಲೇನಿತ್ತು?
“ನಾನು ಅಲ್ಮೇರಾದಿಂದ 67,000 ರೂಪಾಯಿ ತೆಗೆದುಕೊಂಡಿದ್ದೇನೆ. ಇದು ಬಹಳ ತುರ್ತು ಉದ್ದೇಶಕ್ಕಾಗಿ. ನಾನು ಅದನ್ನು ಶೀಘ್ರದಲ್ಲೇ ಹಿಂದಿರುಗಿಸುತ್ತೇನೆ. ನನ್ನನ್ನು ಕ್ಷಮಿಸು ಶಂಸೀರ್ ನಿಮ್ಮ ಮನೆಯಿಂದ ಹಣ ತೆಗೆದುಕೊಂಡಿದ್ದೇನೆ. ನನ್ನ ಸ್ಥಿತಿ ಈಗ ಉತ್ತಮವಾಗಿಲ್ಲ ಮತ್ತು ನಾನು ಯಾರೆಂದು ನಾನು ಉಲ್ಲೇಖಿಸುವುದಿಲ್ಲ. ನಾವಿಬ್ಬರೂ ಒಬ್ಬರಿಗೊಬ್ಬರು ಚೆನ್ನಾಗಿ ತಿಳಿದಿದ್ದೇವೆ. ನಾನು ಇಲ್ಲಿಗೆ ತಲುಪಿದಾಗ ಶಮ್ನಾ ಸ್ನಾನ ಮಾಡುತ್ತಿದ್ದಳು. ನಿಮ್ಮ ತಾಯಿ ಮನೆಯಲ್ಲಿದ್ದರು. ನಾನು ಈ ಪತ್ರವನ್ನು ಇಲ್ಲಿ ಇಡುತ್ತಿದ್ದೇನೆ. ನಾನು ಶೀಘ್ರದಲ್ಲೇ ಹಣವನ್ನು ಹಿಂದಿರುಗಿಸುತ್ತೇನೆ. ಆದರೆ ದಯವಿಟ್ಟು ಅದಕ್ಕೆ ಸ್ವಲ್ಪ ಸಮಯ ಕೊಡಿ. ಇದು ನನ್ನ ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಇದು ಅತ್ಯಂತ ತುರ್ತು ಅಗತ್ಯಕ್ಕಾಗಿ. ಈಗ ನಡೆಯಲು ಕೂಡ ಕಷ್ಟವಾಗಿದೆ. ನನ್ನನು ಕ್ಷಮಿಸು" ಎಂದು ಕಳ್ಳ ಬರೆದಿದ್ದಾನೆ.
ಕಳ್ಳ ಬರೆದ ಪತ್ರದಲ್ಲಿ ಕುಟುಂಬದ ಕೆಲವರ ಹೆಸರುಗಳನ್ನು ನಮೂದಿಸಲಾಗಿದ್ದು, ಕಳ್ಳ ಕುಟುಂಬಕ್ಕೆ ಪರಿಚಿತ ವ್ಯಕ್ತಿಯೇ ಆಗಿರಬಹುದು ಎಂದು ಪೊಲೀಸರು ಸಂಶಯಿಸಿದ್ದಾರೆ. ಅವರತುರ್ತು ಅಗತ್ಯಕ್ಕೆ ಹಣ ಪಡೆಯಲೆಂದು ಶಂಸೀರ್ ಚಿನ್ನಾಭರಣಗಳನ್ನು ಒತ್ತೆ ಇಟ್ಟಿದ್ದರು. ಆದರೆ ಕುಟುಂಬಸ್ಥರು ಮಲಗುವ ಮುನ್ನವೇ ದರೋಡೆ ನಡೆದಿದೆ. ಇದರಿಂದ ಕಳ್ಳನಿಗೆ ಮನೆಯೊಳಗೆ ಹಣವಿರುವುದು ತಿಳಿದಿತ್ತು. ಹೀಗಾಗಿ ಮನೆಯಿಂದ ಹೊರಡುವಾಗ ಕಳ್ಳ ಪತ್ರವನ್ನು ಅಲ್ಲೇ ಬಿಟ್ಟುಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಂಸೀರ್ ದೂರಿನ ಆಧಾರದ ಮೇಲೆ ಚಂಗರಂಕುಲಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.