ಚಿಕ್ಕಮಗಳೂರು, ನ.10 (DaijiworldNews/PY): ನಕ್ಸಲ್ ಚಟುವಟಿಕೆಯಲ್ಲಿ ಗುರುತಿಸಿಕೊಂಡು ಭೂಗತರಾಗಿದ್ದ ಇಬ್ಬರು ನಕ್ಸಲರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಬಂಧಿತ ನಕ್ಸಲರನ್ನು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ನೆಮ್ಮಾರು ಗ್ರಾಮ ಪಂಚಾಯತ್ ವ್ಯಾಪಿಯ ಬಿ.ಜಿ. ಕೃಷ್ಣಮೂರ್ತಿ ಹಾಗೂ ಕಳಸ ತಾಲ್ಲೂಕು ಮಾವಿನಕೆರೆ ಗ್ರಾಮದ ಸಾವಿತ್ರಿ ಎಂದು ಗುರುತಿಸಲಾಗಿದೆ. ಬುಧವಾರ ಮುಂಜಾನರ ಕೇರಳ ರಾಜ್ಯದ ಸುಲ್ತಾನ್ ಬತ್ತೇರಿ ಎಂಬಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿ ಜಿ ಕೃಷ್ಣಮೂರ್ತಿಯವರು ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟದಲ್ಲಿ ಸಕ್ರೀಯರಾಗಿದ್ದರು. ಸಾವಿತ್ರಿಯವರು ನಕ್ಸಲ್ ಚಳವಳಿ ಸೇರಿಕೊಂಡಿದ್ದರು ಎನ್ನಲಾಗಿದೆ.
ಹೊರ ರಾಜ್ಯಗಳಲ್ಲಿ ಕೃಷ್ಣಮೂರ್ತಿ ಹಾಗೂ ಸಾವಿತ್ರಿ ನಕ್ಸಲ್ ಚಳವಳಿಯಲ್ಲಿ ತೊಡಗಿಕೊಂಡು ಭೂಗತರಾಗಿದ್ದಾರೆ ಎನ್ನಲಾಗುತ್ತಿದ್ದರೂ, ಈವರೆಗೆ ಪೊಲೀಸರಿಗೆ ಈ ಕುರಿತು ಸುಳಿವು ಸಿಕ್ಕಿರಲಿಲ್ಲ. ಕೃಷ್ಣಮೂರ್ತಿ ಅವರ ತಂದೆ ಗೋಪಾಲ್ರಾವ್ ಅವರು 2018ರಲ್ಲಿ ನಿಧರಾಗಿದ್ದರು. ಈ ಸಂದರ್ಭವೂ ಕೃಷ್ಣಮೂರ್ತಿ ಅವರು ತಮ್ಮ ತಂದೆಯ ಮುಖ ನೋಡಲು ಬಂದಿರಲಿಲ್ಲ. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೃಷ್ಣಮೂರ್ತಿ ಅವರ ವಿರುದ್ದ 53 ಪ್ರಕರಣಗಳು ಹಾಗೂ ಸಾವಿತ್ರಿ ಅವರ ವಿರುದ್ದ 22 ಪ್ರಕರಣಗಳಿವೆ ಎನ್ನಲಾಗುತ್ತಿದೆ.
ಈ ಬಗ್ಗೆ ಚಿಕ್ಕಮಗಳೂರು ಎಸ್.ಪಿ.ಎಂ.ಎಚ್.ಅಕ್ಷಯ್ ಮಾಹಿತಿ ನೀಡಿದ್ದು, "ಜಿಲ್ಲೆಯ ಇಬ್ಬರು ನಕ್ಸಲ್ ಚಳವಳಿಯ ಮುಖಂಡರನ್ನು ಕೇರಳದ ಸುಲ್ತಾನ್ಭತ್ತೇರಿ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಈ ಕುರಿತು ಅಧಿಕೃತ ಮಾಹಿತಿ ಇಲ್ಲ" ಎಂದು ಹೇಳಿದ್ದಾರೆ.