ಬೆಂಗಳೂರು, ನ 10 (DaijiworldNews/MS): ಸ್ಟಾರ್ ಹೋಟೇಲ್ ನಲ್ಲಿ ಪುಂಡಾಟ ಮಾಡಿ ಅರೆಸ್ಟ್ ಆದ ಹ್ಯಾಕರ್ ಶ್ರೀಕಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ನವೆಂಬರ್ 8ರಂದು ಹ್ಯಾಕರ್ ಶ್ರೀಕಿ ಮತ್ತು ಆತನ ಸ್ನೇಹಿತ ವಿಷ್ಣು ಭಟ್ ಎಂಬುವರನ್ನು ದೊಮ್ಮಲೂರು ಹಳೇ ಏರ್ಪೋರ್ಟ್ ರಸ್ತೆಯ ಪಂಚತಾರಾ ಹೋಟೆಲ್ ನಲ್ಲಿ ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣದಲ್ಲಿ ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದರು.
ಈ ಸಂಬಂಧ ವಿಚಾರಣೆ ಹಾಗೂ ವೈದ್ಯಕೀಯ ಪರೀಕ್ಷೆಗೆ ಇಬ್ಬರನ್ನು ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಹ್ಯಾಕರ್ ಶ್ರೀಕೃಷ್ಣ ಹಾಗೂ ವಿಷ್ಣ ಭಟ್ ಮಾದಕ ದ್ರವ್ಯ ಸೇವನೆ ಮಾಡಿರೋದು ದೃಢಪಟ್ಟಿತ್ತು. ಈ ಸಂಬಂಧ ಎಫ್ಐಆರ್ ದಾಖಲಿಸಿ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನ ಕೂಡ ವಿಧಿಸಿತ್ತು.
ಇದೀಗ ಈ ಪ್ರಕರಣದಲ್ಲಿ ಹ್ಯಾಕರ್ ಶ್ರೀಕೃಷ್ಣ ಆಲಿಯಾಸ್ ಶ್ರೀಕಿಗೆ ಸ್ಥಳೀಯ ಮ್ಯಾಜಿಸ್ಟ್ರೇಟ್ ಕೋರ್ಟ್, ಮಂಗಳವಾರ ಜಾಮೀನು ನೀಡಿದೆ. ಈ ಮೂಲಕ ಹ್ಯಾಕರ್ ಶ್ರೀಕಿ ಮತ್ತೆ ಜಾಮೀನು ಪಡೆದು ಜೈಲಿನಿಂದ ಹೊರಬಂದಂತೆ ಆಗಿದೆ.
ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್ ಆಗಿ ಗುರುತಿಸಿಕೊಂಡಿದ್ದ ಶ್ರೀಕಿ ಸರ್ಕಾರಿ ವೆಬ್ ಸೈಟ್ ಹ್ಯಾಕ್ ಮಾಡಿ, ಡಾರ್ಕ್ ವೆಬ್ ಮೂಲಕ ಡ್ರಗ್ಸ್ ತರಿಸಿಕೊಂಡು ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪ ಕೇಳಿಬಂದಿತ್ತು. ಈ ಸಂಬಂಧ ಸಿಸಿಬಿ ಹಾಗೂ ಸಿಐಡಿ ಪೊಲೀಸರು ವಿಚಾರಣೆ ನಡೆಸಿದ್ದರು.