ಮೈಸೂರು, ನ.10 (DaijiworldNews/PY): ತಿ.ನರಸೀಪುರ ಪಟ್ಟದಲ್ಲಿ ಕ್ಲೋರಿನ್ ಅನಿಲ ಸೋರಿಕೆಯ ಪರಿಣಾಮ ಅಗ್ನಿಶಾಮಕದಳದ ಆರು ಮಂದಿ ಸಿಬ್ಬಂದಿಗಳು ಅಸ್ವಸ್ಥಗೊಂಡ ಘಟನೆ ನಡೆದಿದೆ.
ನೂತನವಾಗಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಘಟಕದಲ್ಲಿ ಕ್ಲೋರಿನ್ ಸಿಲಿಂಡರ್ನಲ್ಲಿ ನ.9ರ ಮಂಗಳವಾರ ರಾತ್ರಿ ಸೋರಿಕೆ ಕಂಡುಬಂದಿದೆ. ಈ ಬಗ್ಗೆ ಮಾಹಿತಿ ತಿಳಿದ ಅಗ್ನಿಶಾಮಕದ ದಳದ ಆರು ಮಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಕ್ಲೋರಿನ್ ಅನಿಲ ಸೋರಿಕೆ ತಪ್ಪಿಸುವ ಸಲುವಾಗಿ ಸುಣ್ಣದ ನೀರನ್ನು ಮಿಶ್ರಣ ಮಾಡಿಕೊಂಡು ನೀರು ಶುದ್ಧೀಕರಣ ಘಟಕದ ಬಳಿ ತೆರಳಿದ 50 ಮೀಟರ್ ದೂರದಲ್ಲಿಯೇ ಆರು ಮಂದಿ ಸಿಬ್ಬಂದಿಗಳು ವಾಸನೆಯಿಂದ ಅಸ್ವಸ್ಥಗೊಂಡಿದ್ದಾರೆ.
ಅಸ್ವಸ್ಥಗೊಂಡಿದ್ದ ಆರು ಮಂದಿ ಅಗ್ನಿಶಾಮಕದಳದ ಸಿಬ್ಬಂದಿಗಳಾದ ನಾಗರಾಜ್, ನಿಜಗುಣ, ದರ್ಶನ್, ಯೋಗೇಶ್, ಪ್ರದೀಪ್, ಕಿಶೋರ್ ಅವರನ್ನು ತಕ್ಷಣವೇ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಬಗ್ಗೆ ವಿಷಯ ತಿಳಿದ ಶಾಸಕ ಅಶ್ವಿನ್ ಕುಮಾರ್, ಡಿಹೆಚ್ಒ ಡಾ.ಕೆ.ಹೆಚ್ ಪ್ರಸಾದ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಅಸ್ವಸ್ಥಗೊಂಡ ಅಗ್ನಿಶಾಮಕ ದಳದ ಸಿಬ್ಬಂದಿಗಳ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
"ಟೆಕ್ನಿನಿಷಿಯನ್ಗಳಿಂದ ಸ್ಥಳ ಪರಿಶೀಲನೆ ನಡೆಸಲಾಗಿದೆ. ಇಂದು ಅಲ್ಪ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗುತ್ತಿದ್ದು, 10 ಗಂಟೆ ಸುಮಾರಿಗೆ ಸಂಪೂರ್ಣವಾಗಿ ಅನಿಲ ಸೋರಿಕೆ ನಿಲ್ಲುವ ಸಾಧ್ಯತೆ ಇದೆ" ಎಂದಿದ್ದಾರೆ.