ಬೆಂಗಳೂರು, ನ 09 (DaijiworldNews/MS): ಯಾರೆಲ್ಲಾ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗಿದ್ದಾರೋ ಅವರಿಗೆ ಮತ್ತೆ ಪಕ್ಷಕ್ಕೆ ಹಿಂದಿರುಗಲು ಅವಕಾಶವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಜಗಳೂರು ಕ್ಷೇತ್ರದ ಜೆಡಿಎಸ್ ಮುಖಂಡ ಬಿ.ದೇವೇಂದ್ರಪ್ಪ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವ್ರು ಬಳಿಕ ಮಾತನಾಡಿ, ಯಾರು ಕಾಂಗ್ರೆಸ್ ಪಕ್ಷವನ್ನು ಸೇರಲು ಬಯಸುತ್ತಾರೋ ಅವರಿಗೆಲ್ಲ ನಾನು ಪಕ್ಷ ಸೇರ್ಪಡೆಗೆ ಅವಕಾಶ ನೀಡಲು ಬಯಸುತ್ತೇನೆ. ಯಾವುದೇ ಷರತ್ತುಗಳಿಲ್ಲದೆ, ಪಕ್ಷದ ಸಿದ್ಧಾಂತವನ್ನು ಒಪ್ಪಿ ಪಕ್ಷಕ್ಕೆ ಬರುವವರಿಗೆ ಮುಕ್ತ ಆಹ್ವಾನವಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದುವರಿಸಿ ಮಾತನಾಡಿದ ಅವರು ಸದಸ್ಯತ್ವ ಅಭಿಯಾನದ ಮೂಲಕ ಮುಕ್ತ ಸದಸ್ಯತ್ವ ಪಡೆಯಲು ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ಅವರು ಅವಕಾಶ ನೀಡಿದ್ದಾರೆ. ನವೆಂಬರ್ 14, ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ. ಹಳೆಯ ಸದಸ್ಯರು ತಮ್ಮ ಸದಸ್ಯತ್ವ ನವೀಕರಿಸಿಕೊಳ್ಳಲೂ ಅವಕಾಶವಿರಲಿದೆ ಎಂದು ಹೇಳಿದ್ದಾರೆ.