ಬೆಂಗಳೂರು, ನ 09 (DaijiworldNews/MS): ಕೇಂದ್ರ ಸರ್ಕಾರವೂ ರೇಷನ್ ವ್ಯವಸ್ಥೆಯಡಿ ಮಕ್ಕಳ ಲಸಿಕೆ ಪೂರೈಸಲು ಮುಂದಾಗಿದ್ದು ,ರಾಜ್ಯಕ್ಕೆ ಈಗಾಗಲೇ ಒಂದು ಕೋಟಿ ಲಸಿಕೆ ಪೂರೈಸುವಂತೆ ಬೇಡಿಕೆ ಇಡಲಾಗಿದೆ . ನಮ್ಮ ರಾಜ್ಯಕ್ಕೆ ಎಷ್ಟು ಪ್ರಮಾಣದ ಲಸಿಕೆ ದೊರೆಯಲಿದೆ ಎಂಬುದರ ಮೇಲೆ ಲಸಿಕೆ ನೀಡುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈಗಾಗಲೇ 12 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ಮಕ್ಕಳ ಲಸಿಕೆಯಲ್ಲೂ ಆರಂಭದಲ್ಲಿ ಯಾರಿಗೆ ಅಗತ್ಯವಿದೆಯೋ ಅಂತಹವರಿಗೆ ಪ್ರಾಶಸ್ತ್ಯದ ಮೇಲೆ ಲಸಿಕೆ ನೀಡಲಾಗುವುದು ಎಂದು ವಿವರಿಸಿದ್ದಾರೆ
ಕೋವಿಡ್ ಸೋಂಕಿನ ಪ್ರಮಾಣ ಇಳಿಕೆಯಾಗಿರುವುದರಿಂದ ಎರಡನೆ ಡೋಸ್ ಲಸಿಕೆ ತೆಗೆದುಕೊಳ್ಳಲು ಉದಾಸೀನ ಮಾಡಲಾಗುತ್ತಿದೆ. ಅದು ಸರಿಯಲ್ಲ . ಈಗಾಗಲೇ ಯೂರೋಪ್ ರಾಷ್ಟ್ರಗಳು, ಅಮೆರಿಕ, ಚೈನಾದಂತಹ ರಾಷ್ಟ್ರಗಳಲ್ಲಿ ಕೋವಿಡ್ ಮೂರನೆ ಅಲೆ ತೀವ್ರವಾಗಿದೆ. ಯಾವುದೇ ಒಂದು ದೇಶ ಅಥವಾ ರಾಜ್ಯದಲ್ಲಿ ಕೋವಿಡ್ ನಿರ್ಮೂಲನೆಯಾದರೆ ಸಾಲದು. ವಿಶ್ವದ ಎಲ್ಲ ರಾಷ್ಟ್ರಗಳಲ್ಲೂ ಸಂಪೂರ್ಣವಾಗಿ ಕೋವಿಡ್ ತೊಲಗುವವರೆಗೂ ಎಚ್ಚರಿಕೆ ವಹಿಸಬೇಕು. ರಾಜ್ಯದಲ್ಲಿ ಶೇ.89ರಷ್ಟು ಮಂದಿಗೆ ಮೊದಲ ಡೋಸ್ ಲಸಿಕೆ ನೀಡಿದ್ದು, ಶೇ.48ರಷ್ಟು ಜನರಿಗೆ ಎರಡನೆ ಡೋಸ್ ಲಸಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ.