ಬೆಂಗಳೂರು, ನ 09 (DaijiworldNews/MS): ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ನವರು ಭಾಗಿಯಾಗಿದ್ದರೆ ತನಿಖೆ ನಡೆಸಿ, ಗಲ್ಲಿಗೇರಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬಿಟ್ ಕಾಯಿನ್ ಹಗರಣ ವಿಚಾರವಾಗಿ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿಕೆಗೆ ತಿರುಗೇಟು ನೀಡಿರುವ ಶಿವಕುಮಾ ನಮ್ಮ ಬಳಿಯೂ ಹಗರಣಕ್ಕೆ ಸಂಬಂಧಿಸಿದಂತೆ ದಾಖಲೆಗಳಿವೆ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ. ಬಿಟ್ ಕಾಯಿನ್ ದಂಧೆಯಲ್ಲಿ ಕಾಂಗ್ರೆಸ್ ನವರು ಭಾಗಿಯಾಗಿದ್ದರೆ ನೇಣಿಗೇರಿಸಲಿ ಎಂದು ಸವಾಲು ಎಸೆದಿದ್ದಾರೆ.
ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸುದ್ದಿಗೋಷ್ಠಿ ನಡೆಸಿದ್ದೂ ನೆನಪಿದೆ. ಗೃಹ ಸಚಿವರು ಮಾತನಾಡಿದ್ದೂ ನೆನಪಿದೆ.ಶ್ರೀಕಿಯನ್ನು ಇಷ್ಟು ದಿನ ಬಿಟ್ಟು ಈಗ ಏಕೆ ಅರೆಸ್ಟ್ ಮಾಡಲಾಯಿತು. ಆತನ ವಿರುದ್ಧ ಹೈಕೋರ್ಟ್ ನಲ್ಲಿ ಕೇಸ್ ಇದೆ. ಅದು ಏನಾಯಿತು? ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಸರ್ಕಾರ ನೀಡಲಿ. ಬಿಟ್ ಕಾಯಿನ್ ಪ್ರಕರಣ ಇಡಿಗೆ ವಹಿಸಲಾಗಿದೆ ಎಂದು ಸಿಎಂ ಹೇಳುತ್ತಿದ್ದಾರೆ. ಅದರ ನೋಟಿಫಿಕೇಷನ್ ಏನಿದೆ? ಮಾಹಿತಿ ಕೊಡಲಿ ಎಂದು ಒತ್ತಾಯಿಸಿದರು.