ಬೆಂಗಳೂರು, ನ 09 (DaijiworldNews/MS): ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆಗೆ ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ ಎನ್ನುವ ವರದಿಯ ಹಿನ್ನಲೆಯಲ್ಲಿ , ಪ್ರತಿಪಕ್ಷದ ವಿರುದ್ಧ ಬಿಜೆಪಿ ಹರಿಹಾಯ್ದಿದ್ದು "ಕಾಂಗ್ರೆಸ್ ಪಕ್ಷ ಎನ್ನುವುದು ಒಂದು ಪಕ್ಷವಲ್ಲ, ಅದು ಪ್ರಭಾವಿಗಳ ಕುಟಿಲ ಕೂಟ. ದೇಶವನ್ನು ಅನೇಕ ವರ್ಷಗಳ ಕಾಲ ತಮ್ಮ ಕಪಿಮುಷ್ಠಿಯಲ್ಲಿ ಇರಿಸಿಕೊಂಡಿದ್ದು ಇದೇ ನಕಲಿ ಕುಟುಂಬ. 'ಜನಾಕ್ರೋಶ'ದ ಬಿಸಿಯಲ್ಲಿ ಕಾಂಗ್ರೆಸ್ ಪಕ್ಷ ಸುಟ್ಟು ಹೋಗುತ್ತಿದೆ ಎಂಬುದು ನೆನಪಿರಲಿ" ಎಂದಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕವೂ , " ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಉದ್ದೇಶಿಸಿ, 'ನಿಮ್ಮನ್ನು ನೀವೇ ಕಾಂಗ್ರೆಸ್ ರಥ ಎಳೆಯುವ ಡಬಲ್ ಎಂಜಿನ್ ಎಂದು ಬಿಂಬಿಸಿಕೊಂಡಿದ್ದೀರಿ, ಶುಭವಾಗಲಿ! ನಿಮ್ಮ ಡಬಲ್ ಎಂಜಿನ್ ಸಂಘಟನೆ ಸಂದರ್ಭದಲ್ಲಾದರೂ ದಲಿತ ಮುಖ್ಯಮಂತ್ರಿ ವಿಚಾರ ನನಸಾಗುವುದೇ? ದಲಿತರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಲು ನಾವು ಬದ್ಧ ಎಂದು ಘೋಷಿಸಿ ನೋಡೋಣ" ಎಂದು ಸವಾಲೆಸೆದಿದೆ.
"ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗಲೇ ಜನಾಕ್ರೋಶದ ಎದುರು ರಾಹುಲ್ ಗಾಂಧಿ ಸ್ವಕ್ಷೇತ್ರದಲ್ಲಿ ಸೋತರು, ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತರು, ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರದಲ್ಲಿ ಕೇವಲ 1 ಗೆಲುವು, ಬಹುಮತದಲ್ಲಿದ್ದ ಸರ್ಕಾರ 70 ಸ್ಥಾನಕ್ಕೆ ಇಳಿಯಿತು ಕಾಂಗ್ರೆಸ್ ವಿರುದ್ಧ ಜನಾಕ್ರೋಶ ನಿರಂತರವಾಗಿದೆ" ಎಂದು ಬಿಜೆಪಿ ವ್ಯಂಗ್ಯವಾಡಿದೆ
"ಈ ದೇಶದಲ್ಲಿ ಜನಾಕ್ರೋಶವಿದೆ, ಕುಟುಂಬ ರಾಜಕಾರಣದ ವಿರುದ್ಧ, ಕೋಮು ಓಲೈಕೆಯ ವಿರುದ್ಧ, ಭ್ರಷ್ಟಾಚಾರದ ವಿರುದ್ಧ, ಸ್ವಜನ ಪಕ್ಷಪಾತದ ವಿರುದ್ಧ, ಬಡವರು ಬಡವರಾಗಿಯೇ ಇರಬೇಕೆಂಬ ನಿಲುವಿನ ವಿರುದ್ಧ ಇವೆಲ್ಲವನ್ನು ದೇಶದಲ್ಲಿ ಕಾಂಗ್ರೆಸ್ ಜೀವಂತವಾಗಿಟ್ಟಿದೆ. ಮಗನನ್ನು ಮಂತ್ರಿ ಮಾಡಿದ ಕಾರಣಕ್ಕಾಗಿ ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭೆ ಚುನಾವಣೆಯಲ್ಲಿ ಸೋತರು. ಮಗನನ್ನು ಶಾಸಕನಾಗಿಸುವ ಉಮೇದಿನಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತರು. ಡಿಕೆಶಿ ಅವರೇ, ನಿಮಗೆ ಮಗಳನ್ನು ರಾಜಕೀಯಕ್ಕೆ ಕರೆ ತರುವ ಕನಸಿದೆಯೇ ? ಇದ್ದರೆ ಜನಾಕ್ರೋಶ ಎದುರಿಸಲು ಸಿದ್ಧರಾಗಿ" ಎಂದು ಟೀಕಿಸಿದೆ.