ಬೆಳಗಾವಿ, ನ.08 (DaijiworldNews/PY): "ವಿಧಾನಮಂಡಲ ಚಳಿಗಾಲದ ಅಧಿವೇಶನದ ಕಲಾಪಗಳನ್ನು ಮೊದಲ ಬಾರಿಗೆ ವೆಬ್ಕಾಸ್ಟ್ ಮೂಲಕ ನೇರಪ್ರಸಾರ ಮಾಡಲಾಗುವುದು" ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಯಾವುದೇ ತೊಂದರೆಗಳಿಲ್ಲದಂತೆ ಅಧಿವೇಶನವನ್ನು ಸುಸೂತ್ರವಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದಿದ್ದಾರೆ.
"ಅಧಿವೇಶನದಲ್ಲಿ ಜನಪ್ರತಿನಿಧಿಗಳಿ ಏನು ಚರ್ಚಿಸುತ್ತಾರೆ ಎನ್ನುವುದನ್ನು ಸಾರ್ವಜನಿಕರು ಸಹ ವೀಕ್ಷಿಸಲಿ ಎಂದು ನೇರಪ್ರಸಾರಕ್ಕೆ ತೀರ್ಮಾನಿಸಲಾಗಿದೆ. ನ.20ರೊಳಗೆ ಎಲ್ಲಾ ತಯಾರಿಯನ್ನು ಪೂರ್ಣಗೊಳಿಸುವಂತೆ ಇ-ಗವರ್ನಲ್ಸ್ ಲೋಕೋಪಯೋಗಿ ಹಾಗೂ ವಾರ್ತಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ" ಎಂದು ತಿಳಿಸಿದ್ದಾರೆ.
"ಪ್ರತಿ ಬಾರಿ ಅಧಿವೇಶನ ನಡೆಯುವ ಸಂದರ್ಭ ವಾಸ್ತವ್ಯಕ್ಕಾಗಿ ಕೋಟಿಗಟ್ಟಲೆ ಹಣ ವ್ಯಯ ಮಾಡುವುದನ್ನು ತಪ್ಪಿಸಲು, ಇಲ್ಲಿ ಶಾಸಕರ ಭವನ ನಿರ್ಮಿಸಬೇಕು ಎನ್ನುವುದು ಬಹುಜನರ ಬೇಡಿಕೆ. ಈ ವಿಚಾರವನ್ನು ಸಿಎಂ ಅವರ ಗಮನಕ್ಕೆ ತರುತ್ತೇನೆ. ಇಲ್ಲಿ ಶಾಸಕರ ಭವನ ನಿರ್ಮಣ ಮಾಡುವುದು ಸೂಕ್ತ ಎನ್ನುವುದ ನನ್ನ ಅಭಿಪ್ರಾಯ" ಎಂದು ಹೇಳಿದ್ದಾರೆ.
"ಅಧಿವೇಶನದ ಸಂದರ್ಭ ಇಲ್ಲಿನ ಕಚೇರಿಗಳ ಕೆಲಸಗಳು ಸುಗಮವಾಗಿ ನಡೆಸಲು ಅನುಕೂಲ ಆಗುವ ರೀತಿಯಲ್ಲಿ ಜಿಲ್ಲಾಡಳಿತ ಕ್ರಮ ವಹಿಸುತ್ತದೆ. ಸುವರ್ಣ ವಿಧಾನಸೌಧವು ವಿಧಾನಸೌಧದ ರೀತಿಯಲ್ಲಿ ವರ್ಷಪೂರ್ತಿ ಚಟುವಟಿಕೆಯಿಂದ ಕೂಡಿರಬೇಕು" ಎಂದಿದ್ದಾರೆ.