ಗುಜರಾತ್, ನ 08 (DaijiworldNews/MS): ಗುಜರಾತ್ ಕರಾವಳಿಯ ತೀರದ ಅರಬ್ಭೀ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ಸಂದರ್ಭ ಪಾಕಿಸ್ತಾನದ ಕಡಲ ಭದ್ರತಾ ಪಡೆ (ಪಿಎಂಎಸ್ಎ) ಸಿಬ್ಬಂದಿ ಭಾರತೀಯ ಮೀನುಗಾರರ ಮೇಲೆ ಗುಂಡಿನ ದಾಳಿ ನಡೆಸಿ ಮೀನುಗಾರನ ಹತ್ಯೆ ನಡೆಸಿದ್ದು, ಈ ಸಂಬಂಧ ಇದೀಗ 10 ಪಾಕ್ನ ನೌಕಾ ನೆಲೆಯ ಭದ್ರತಾ ಸಿಬ್ಬಂದಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ಪೋರಬಂದರ್ ನ ನವಿಬಂದರ್ ಪೊಲೀಸರು ಬೆಸ್ತನ ಹತ್ಯೆ ಮಾಡಲು ಭಾಗಿಯಾಗಿರುವ ಸಿಬ್ಬಂದಿ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಭಾರತೀಯ ಮೀನುಗಾರರ ಮೇಲೆ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನ ಪಡೆಗಳ ಎರಡು ದೋಣಿಗಳಲ್ಲಿದ್ದ 10 ಸಿಬ್ಬಂದಿ ವಿರುದ್ಧ ಆರೋಪ ಹೊರಿಸಲಾಗಿದೆ.
ಗುಜರಾತ್ನ ಓಖಾದಿಂದ ಹೊರಟಿದ್ದ "ಜಲ್ಪರಿ" ಎಂಬ ಹೆಸರಿನ ಮೀನುಗಾರಿಕಾ ದೋಣಿಯೂ ಅರಬ್ಭೀ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ಸಂದರ್ಭ ಅಂತಾರಾಷ್ಟ್ರೀಯ ಕಡಲ ಗಡಿ ರೇಖೆ (IMBL)ಬಳಿ ಪಾಕ್ ಕಡಲ ಭದ್ರತಾ ಸಿಬ್ಬಂದಿ ದಾಳಿ ನಡೆಸಿದ್ದರು.
"ಮೀನುಗಾರನ ಹತ್ಯೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಈ ವಿಚಾರವಾಗಿ ಪಾಕಿಸ್ತಾನದೊಂದಿಗೆ ರಾಜತಾಂತ್ರಿಕವಾಗಿ ಚರ್ಚಿಸಲಿದ್ದೇವೆ. ಪ್ರಕರಣದ ತನಿಖೆ ನಡೆಯುತ್ತಿದೆ" ಎಂದು ಕೇಂದ್ರ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿತ್ತು.