ಮುಂಬೈ, ನ.08 (DaijiworldNews/HR): ಎನ್ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ತಂದೆ ಧ್ಯಾನ್ದೇವ್ ವಾಂಖೆಡೆ ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಪ್ರತಿಕ್ರಿಯೆಯಾಗಿ ಅಫಿಡವಿಟ್ ಸಲ್ಲಿಸುವಂತೆ ಮಹಾರಾಷ್ಟ್ರ ಸಚಿವ ಮತ್ತು ಎನ್ಸಿಪಿ ನಾಯಕ ನವಾಬ್ ಮಲಿಕ್ ಅವರಿಗೆ ಬಾಂಬೆ ಹೈಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಅವರ ರಜಾಕಾಲದ ಪೀಠವು ಮಂಗಳವಾರದೊಳಗೆ ಅಫಿಡವಿಟ್ ಸಲ್ಲಿಸುವಂತೆ ಮಲಿಕ್ ಅವರಿಗೆ ಸೂಚಿಸಿದ್ದು, ಬುಧವಾರದಂದು ಹೆಚ್ಚಿನ ವಿಚಾರಣೆಗೆ ವಿಷಯವನ್ನು ಮುಂದೂಡಿದೆ.
ಇನ್ನು ಡ್ರಗ್ಸ್ ಜಾಲದಲ್ಲಿ ನಿಮ್ಮ ನಾದಿನಿಯೂ ಭಾಗಿಯಾಗಿದ್ದಾರೆಯೇ? ಎಂದು ಮಹಾರಾಷ್ಟ್ರದ ಸಚಿವ ನವಾಬ್ ಮಲ್ಲಿಕ್ ಅವರು ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ನವಾಬ್ ಮಲ್ಲಿಕ್, ಸಮೀರ್ ದಾವೂದ್ ಅವರೇ ನಿಮ್ಮ ನಾದಿನಿ ಹರ್ಷದಾ ದಿನಾನಾಥ್ ರೆಡ್ಕರ್ ಅವರು ಡ್ರಗ್ಸ್ ವಹಿವಾಟಿನಲ್ಲಿ ತೊಡಗಿದ್ದಾರೆಯೇ. ಅವರ ವಿರುದ್ಧ ಪ್ರಕರಣ ಪುಣೆ ನ್ಯಾಯಾಲಯದಲ್ಲಿ ಬಾಕಿ ಇದೆಯೇ ಎಂದು ನೀವು ಉತ್ತರಿಸಬೇಕು. ಇಲ್ಲಿದೆ ಪುರಾವೆ ಎಂದು ದಾಖಲೆಯೊಂದನ್ನು ಹಂಚಿಕೊಂಡಿದ್ದಾರೆ.