ನವದೆಹಲಿ, ನ.08 (DaijiworldNews/PY): "ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿ ತ್ರಿಪುರಾದಲ್ಲಿ ನಾಗರಿಕರನ್ನು ಬಂಧಿಸುವ ಮುಖೇನ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ತ್ರಿಪುರಾ ಹೊತ್ತಿ ಉರಿಯುತ್ತಿದೆ ಎಂದರೆ, ಅದನ್ನು ಸರಿಪಡಿಸಿಕೊಳ್ಳಲು ಕ್ರಮ ಕೈಗೊಳ್ಳುವುದು ಅಗತ್ಯ. ಆದರೆ, ಬಿಜೆಪಿಯವರು ಮಾಹಿತಿದಾರರನ್ನು ಗುಂಡಿಕ್ಕಿ ಹತ್ಯೆಗೈಯುವಂತಹ ತಮ್ಮ ನೆಚ್ಚಿನ ತಂತ್ರವನ್ನು ಇಲ್ಲಿ ಅನುಸರಿಸುತ್ತಿದ್ದಾರೆ" ಎಂದು ದೂರಿದ್ದಾರೆ.
ತ್ರಿಪುರಾದಲ್ಲಿ ಮಸೀದಿಗಳ ಮೇಲೆ ನಡೆದ ದಾಳಿ ಹಾಗೂ ಸಂಘರ್ಷದ ಹಿನ್ನೆಲೆ ಸಾಮಾಜಿಕ ಜಾಲತಾಣ ನಿರ್ವಹಿಸುವ ಪತ್ರಕರ್ತರು ಹಾಗೂ ಹೋರಾಟಗಾರರ ವಿರುದ್ದ ಪೊಲೀಸರು ಯುಎಪಿಎ ಅಡಿ ಪ್ರಕರಣ ದಾಖಲಿಸಿದ ಬಳಿಕ ರಾಹುಲ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ತ್ರಿಪುರಾದಲ್ಲಿ ಮಸೀದಿಗಳ ಮೇಲೆ ನಡೆದ ದಾಳಿ ಹಾಗೂ ಸಂಘರ್ಷಕ್ಕೆ ಸಂಬಂಧಿಸಿದಂತೆ ತ್ರಿಪುರಾ ಪೊಲೀಸರು ಸಾಮಾಜಿಕ ಜಾಲತಾಣ ಖಾತೆ ಹೊಂದಿರುವ 102 ಮಂದಿಯ ವಿರುದ್ದ ಯುಎಪಿಎ, ಅಪರಾಧಕ್ಕೆ ಸಂಚು ರೂಪಿಸುವುದು ಸೇರಿ ವಿವಿಧ ಆರೋಪಗಳ ಅಡಿ ಪ್ರಕರಣ ದಾಖಲಿಸಿದ್ದಾರೆ.