ಹಾಸನ, ನ 08 (DaijiworldNews/MS): ಸಂತಾನ ಪ್ರಾಪ್ತಿ, ಆರ್ಥಿಕ ಸಂಕಷ್ಟ ಪರಿಹಾರವಾಗಲಿ, ಕೆಲಸ ಸಿಗಲಿ ಇಂತಹ ಬೇಡಿಕೆಗಳನ್ನು ದೇವರ ಮುಂದಿಡುವುದು ಸಾಮಾನ್ಯ. ಆದರೆ ಹಾಸನಾಂಬೆಗೆ ವಿಚಿತ್ರ ಬೇಡಿಕೆಗಳನ್ನು ಮುಂದಿಟ್ಟು ಭಕ್ತರು ಪತ್ರದ ಮೂಲಕ ದೇವಿ ಮೊರೆ ಹೋಗಿದ್ದಾರೆ. ಅದರಲ್ಲೂಓರ್ವ ಭಕ್ತ " ಶಾಸಕ ಎಚ್.ಡಿ ರೇವಣ್ಣನ ಕುಟುಂಬದ ಸದಸ್ಯರು ಜನರ ಪ್ರಾಣ ಹಿಂಡುತ್ತಿದ್ದಾರೆ. ಅವರ ಕುಟುಂಬದವರೆಲ್ಲರನ್ನು ಸೋಲಿಸಿಬಿಡು ತಾಯಿ...! ಎಂದು ದೇವರಲ್ಲಿ ಬೇಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಅಕ್ಟೋಬರ್ 28ರಿಂದ ನವೆಂಬರ್ 6ರವರೆಗೆ ಹಾಸನಾಂಬೆ ಉತ್ಸವ ಜರುಗಿದ್ದು, 10 ದಿನಗಳಲ್ಲಿ 4 ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬೆ ದೇವಿ ದರ್ಶನ ಪಡೆದಿದ್ದು ಇದೀಗ ಹಾಸನಾಂಬೆ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದ್ದು, ಕಾಣಿಕೆ ಜೊತೆಗೆ ಭಕ್ತರ ವಿಭಿನ್ನ ಬೇಡಿಕೆಯ ಪತ್ರಗಳು ಕೂಡ ಪತ್ತೆಯಾಗಿದ್ದು ಎಲ್ಲರ ಗಮನ ಸೆಳೆಯುತ್ತಿವೆ.
ಹುಂಡಿ ಎಣಿಕೆ ವೇಳೆ ಸಿಕ್ಕಿದ ಪತ್ರವೊಂದು ಕುತೂಹಲಕ್ಕೆ ಕಾರಣವಾಗಿದ್ದು ಅದರಲ್ಲಿ ತಾಯಿ ಹಾಸನಾಂಬೆ ನಿನ್ನ ಕೃಪೆಯಿಂದ ಹೊಳೆನರಸೀಪುರದ ಎಮ್ ಎಲ್ ಎ ಬದಲಾಗಬೇಕು' ಎಂದು ಬೇಡಿಕೆ ಇಡಲಾಗಿದೆ.
"ತಾಯಿ ಹಾಸನಾಂಬೆ...! ನಿನ್ನ ಕೃಪೆಯಿಂದ ಹೊಳೆನರಸೀಪುರದ ಎಮ್ ಎಲ್ ಎ ಬದಲಾಗಬೇಕು ಜನರ ಕಷ್ಟದಿಂದ ಪಾರು ಮಾಡಬೇಕು. ಎಚ್.ಡಿ ರೇವಣ್ಣನ ಕುಟುಂಬದ ಸದಸ್ಯರು ಜನರ ಪ್ರಾಣ ಹಿಂಡುತ್ತಿದ್ದಾರೆ. ಅವರ ಕುಟುಂಬದವರೆಲ್ಲರನ್ನು ಸೋಲಿಸಿಬಿಡು ತಾಯಿ...! ಅವರ ಮುಂದೆ ಯಾರನ್ನು ಬರಲು ಬಿಡುತ್ತಿಲ್ಲ. ಒಳ್ಳೆದು ಮಾಡು ತಾಯಿಹೆಚ್.ಎನ್ ಪುರದ ಜನತೆಗೆ..." ಎಂದು ಬರೆದಿದೆ.
ಇನ್ನು ಎಚ್. ಡಿ. ರೇವಣ್ಣ ಕುಟುಂಬದಲ್ಲಿ ಎಚ್. ಡಿ. ರೇವಣ್ಣ ಹೊಳೆನರಸೀಪುರದ ಶಾಸಕರು. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಹಾಸನದ ಸಂಸದರು. ರೇವಣ್ಣ ಪತ್ನಿ ಭವಾನಿ ರೇವಣ್ಣ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾರೆ.