ನವದೆಹಲಿ,ನ 08 (DaijiworldNews/MS): ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿರುವ ವರದಿಯ ಬಗ್ಗೆ ಸುಪ್ರೀಂ ಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದ್ದು ಉತ್ತರ ಪ್ರದೇಶ ಪೊಲೀಸರಿಂದ ನಡೆಯುತ್ತಿರುವ ತನಿಖೆಯನ್ನು ಮಾಜಿ ಹೈಕೋರ್ಟ್ ನ್ಯಾಯಾಧೀಶರು ಮೇಲ್ವಿಚಾರಣೆ ಮಾಡುವಂತೆ ಸೂಚಿಸಿದೆ. ಮಾತ್ರವಲ್ಲದೆ ಉತ್ತರ ಪ್ರದೇಶ ಪೊಲೀಸರು ನಡೆಸುತ್ತಿರುವ ತನಿಖೆ ವೇಗವಾಗಿ ನಡೆಯುತ್ತಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಚಾಟಿ ಬೀಸಿದೆ.
ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರ ನೇತೃತ್ವದ ಪೀಠ ಈ ನಿಲುವನ್ನು ವ್ಯಕ್ತಪಡಿಸಿದೆ. ಇದರೊಂದಿಗೆ ಶುಕ್ರವಾರದೊಳಗೆ ಉತ್ತರ ಪ್ರದೇಶ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದೆ. ಸಿಬಿಐ ತನಿಖೆಯೊಂದೇ ಎಲ್ಲದಕ್ಕೂ ಉತ್ತರವಲ್ಲ ಎಂದ ನ್ಯಾಯಪೀಠ, ಇದೀಗ ಉತ್ತರ ಪ್ರದೇಶ ಪೊಲೀಸರ ವಿಶೇಷ ತನಿಖಾ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ. ಈ ತನಿಖೆಯ ಮೇಲುಸ್ತುವಾರಿಯನ್ನು ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ವಹಿಸಿಕೊಳ್ಳಬೇಕು. ತನಿಖೆಯ ಮೇಲೆ ನಿಗಾ ಇರಿಸಬೇಕು ಎಂದು ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಆರೋಪ ಪಟ್ಟಿಗಳನ್ನು ಸಲ್ಲಿಸಬೇಕಾದ ಅಗತ್ಯತೆ ಇದೆ. ಜೊತೆಯಲ್ಲೇ ಇದೀಗ ಸಂಗ್ರಹವಾಗಿರುವ ಸಾಕ್ಷ್ಯಗಳನ್ನೂ ಜತನದಿಂದ ಕಾಪಾಡಬೇಕಿದೆ ಎಂದು ನ್ಯಾಯಪೀಠ ತಾಕೀತು ಮಾಡಿದೆ.
ಲಖೀಂಪುರ ಹಿಂಸಾಚಾರದ ವೇಳೆ 2 ಪ್ರತ್ಯೇಕ ಘಟನೆಗಳು ನಡೆದಿವೆ. ಪ್ರತಿಭಟನಾ ನಿರತ ರೈತರ ಮೇಲೆ ವಾಹನ ಚಲಾಯಿಸಿದ್ದು ಮೊದಲ ಘಟನೆ ಆದರೆ, ವಾಹನ ಚಲಾಯಿಸಿದ ಆರೋಪಿಗಳ ಮೇಲೆ ದಾಳಿ ನಡೆಸಿದ್ದು ಎರಡನೇ ಘಟನೆ. ಈ ಎರಡೂ ಘಟನೆಗಳ ಸಂಬಂಧ ಸೂಕ್ತ ತನಿಖೆ ನಡೆಸಿ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ನೀಡಬೇಕಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
10 ದಿನಗಳ ಮುಂದೂಡಿಕೆಯಾಗಿದ್ದರೂ ಏಕೆ ಬಂದಿಲ್ಲ ಎಂದು ಲ್ಯಾಬ್ ವರದಿಗಳ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದ್ದು ಇದಕ್ಕೆ ಉತ್ತರ ಪ್ರದೇಶ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ, ನವೆಂಬರ್ 15 ರೊಳಗೆ ಲ್ಯಾಬ್ ವರದಿ ಬರಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರ ಫೋನ್ ಅನ್ನು ಮಾತ್ರ ಏಕೆ ವಶಪಡಿಸಿಕೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನೆಗೆ ಇದಕ್ಕೆ ಉತ್ತರಿಸಿದ ಹರೀಶ್ ಸಾಳ್ವೆ, “ಎಲ್ಲಾ ಸಿಡಿಆರ್ಗಳನ್ನು (ಕಾಲ್ ಡಿಟೇಲ್ ರೆಕಾರ್ಡ್) ಸಂಗ್ರಹಿಸಲಾಗಿದೆ. ಆ ಸಮಯದಲ್ಲಿ ಅವರು (ಆರೋಪಿಗಳು) ಎಲ್ಲಿದ್ದರು ಎಂಬುದು ತಿಳಿದು ಬರಲಿದೆ ಎಂದು ಹೇಳಿದ್ದಾರೆ.