ಮುಂಬೈ, ನ.08 (DaijiworldNews/PY): "ನನಗೂ ಕ್ರೂಸ್ ಪಾರ್ಟಿಗೆ ಆಹ್ವಾನ ಬಂದಿದ್ದು, ಕ್ರೂಸ್ ಪಾರ್ಟಿಗೆ ನನ್ನನ್ನು ಕಾಶಿಫ್ ಖಾನ್ ಎನ್ನುವವರು ಆಹ್ವಾನಿಸಿದ್ದರು" ಎಂದು ಮಹಾರಾಷ್ಟ್ರದ ಸಚಿವ ಅಸ್ಲಾಂ ಶೇಖ್ ಸೋಮವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನಗೆ ಕಾಶಿಫ್ ಖಾನ್ ಎನ್ನುವವರು ವೈಯುಕ್ತಿಕವಾಗಿ ಪರಿಚಯ ಇಲ್ಲ. ಅಲ್ಲದೇ, ಅವರ ಸಂಪರ್ಕ ಸಂಖ್ಯೆ ಕೂಡಾ ನನ್ನ ಬಳಿ ಇಲ್ಲ. ಈ ಬಗ್ಗೆ ಸಾಕ್ಷ್ಯಗಳಿದ್ದಲ್ಲಿ ಅದನ್ನು ನನ್ನ ಮುಂದೆ ತರಬೇಕು" ಎಂದು ಸವಾಲೆಸೆದಿದ್ದಾರೆ.
"ಕ್ರೂಸ್ ಪಾರ್ಟಿಗೆ ನನಗೂ ಆಹ್ವಾನ ಬಂದಿತ್ತು. ನಾನು ಸಚಿವನಾಗಿರುವ ಕಾರಣ ಅನೇಕ ಕಾರ್ಯಕ್ರಮಗಳಿಗೆ ಹಾಗೂ ಪಾರ್ಟಿಗಳಿಗೆ ನನಗೆ ಆಹ್ವಾನ ಬರುತ್ತದೆ" ಎಂದಿದ್ದಾರೆ.
ಬಿಜೆಪಿ ನಾಯಕ ಮೋಹಿತ್ ಕಾಂಬೋಜ್ ಅವರು, "ಮಹಾರಾಷ್ಟ್ರದ ಸಚಿವ ಅಸ್ಲಂ ಶೇಖ್ ಅವರು ಫ್ಯಾಶನ್ ಟಿವಿ ಇಂಡಿಯಾ ಎಂಡಿ ಆಗಿರುವ ಡ್ರಗ್ ಪೆಡ್ಲರ್ ಕಾಶಿಫ್ ಖಾನ್ ಅವರನ್ನು ತಮ್ಮ ಪಾರ್ಟಿಗಳಿಗೆ ಕರೆಯುತ್ತಿದ್ದರು" ಎಂದು ಆರೋಪಿಸಿದ್ದರು.
ಐಷಾರಾಮಿ ಹಡಗಿನಲ್ಲಿ ನಡೆದ ಕ್ರೂಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶಿಫ್ ಖಾನ್ ಹೆಸರು ಕೇಳಿಬಂದಿತ್ತು.