ನವದೆಹಲಿ, ನ 08 (DaijiworldNews/MS): ದೇಶದಲ್ಲಿ ನೋಟು ಅಮಾನ್ಯೀಕರಣದ ಐದು ವರ್ಷಗಳು ಪೂರ್ಣಗೊಂಡಿದ್ದು, ಈ ಸಂದರ್ಭದಲ್ಲಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸೋಮವಾರ ಇದನ್ನು "ವಿಪತ್ತು" ಎಂದು ಕರೆದಿದ್ದಾರೆ. ಮಾತ್ರವಲ್ಲದೆ ನೋಟು ಅಮಾನ್ಯೀಕರಣದ ಹೆಜ್ಜೆ ಯಶಸ್ವಿಯಾಗಿದೆಯೇ, ಭ್ರಷ್ಟಾಚಾರ ಏಕೆ ಕೊನೆಗೊಂಡಿಲ್ಲ ಮತ್ತು ಕಪ್ಪು ಹಣ ದೇಶಕ್ಕೆ ಮರಳಿಲ್ಲ ಎಂದು ಪ್ರಶ್ನಿಸಿದ್ದಾರೆ.
ನವೆಂಬರ್ 8, 2016 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ದೂರದರ್ಶನದಲ್ಲಿ ಅದೇ ದಿನ ಮಧ್ಯರಾತ್ರಿಯಿಂದ ₹ 500 ಮತ್ತು ₹ 1,000 ಹೆಚ್ಚಿನ ಮುಖಬೆಲೆಯ ಎಲ್ಲಾ ಕರೆನ್ಸಿ ನೋಟುಗಳನ್ನು ನಿಷೇಧಿಸುವ ನಿರ್ಧಾರವನ್ನು ಪ್ರಕಟಿಸಿದ್ದರು. ಇದರಿಂದ ಭಾರತದ 86% ಕರೆನ್ಸಿಯನ್ನು ಅಮಾನ್ಯಗೊಂಡಿತ್ತು.
ಪ್ರಧಾನಿ ಮೋದಿ ಅವರಿಗೆ 5 ಪ್ರಶ್ನೆಗಳನ್ನು ಕೇಳಿರುವ ಪ್ರಿಯಾಂಕಾ ಗಾಂಧಿ "ನೋಟು ರದ್ದತಿ ಯಶಸ್ವಿಯಾಗಿದ್ದರೆ, ಭ್ರಷ್ಟಾಚಾರ ಏಕೆ ಕೊನೆಗೊಂಡಿಲ್ಲ? ಕಪ್ಪು ಹಣ ಏಕೆ ವಾಪಸ್ ಬಂದಿಲ್ಲ? ಆರ್ಥಿಕತೆ ಏಕೆ ನಗದು ರಹಿತವಾಗಿ ಹೋಗಿಲ್ಲ? ಭಯೋತ್ಪಾದನೆಗೆ ಏಕೆ ಹೊಡೆತ ಬಿದ್ದಿಲ್ಲ?ಬೆಲೆ ಏರಿಕೆಯನ್ನು ಏಕೆ ನಿಯಂತ್ರಿಸಿಲ್ಲ ಎಂದು 'ಡಿಮೊನಿಟೈಸೇಶನ್ ಡಿಸಾಸ್ಟರ್' ಎಂಬ ಹ್ಯಾಶ್ಟ್ಯಾಗ್ ಬಳಸಿ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.