ಬೆಂಗಳೂರು, ನ 08 (DaijiworldNews/MS): ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆಗೆ ಕಾಂಗ್ರೆಸ್ ಪಕ್ಷ ನಿರ್ಧರಿಸಿದ್ದು, ಇದಕ್ಕೆ ವ್ಯಂಗ್ಯವಾಡಿರುವ ಬಿಜೆಪಿಯೂ "ಕಾಂಗ್ರೆಸ್ಸಿಗರೇ, ಯಾರ ವಿರುದ್ಧ ಈ ಜನಾಕ್ರೋಶ? 60 ವರ್ಷಗಳ ಕಾಲ ದೇಶ ಆಳಿದ ನಂತರವೂ ಅಸಮಾನತೆ, ಬಡತನವನ್ನು ಜೀವಂತವಿಟ್ಟ ಕಾರಣಕ್ಕಾಗಿ ಜನಾಕ್ರೋಶ ಸಭೆ ನಡೆಸುತ್ತೀರಾ? ಎಂದು ವ್ಯಂಗ್ಯವಾಡಿದೆ.
ಈ ಬಗ್ಗೆ ಬಿಜೆಪಿ ರಾಜ್ಯ ಘಟಕ ಟ್ವೀಟ್ ಸೋಮವಾರ ಮಾಡಿದ್ದು, ಕಾಂಗ್ರೆಸ್ಸಿಗರೇ, ನೀವು ಭಾರತೀಯರಿಗೆ ಮಾಡಿದ ಐತಿಹಾಸಿಕ ಅನ್ಯಾಯವನ್ನು ಮರೆಯಲು ಸಾಧ್ಯವೇ? ಈ ಕಾರಣಕ್ಕಾಗಿ ಜನರೇ ನಿಮ್ಮ ವಿರುದ್ಧ ಆಕ್ರೋಶಗೊಂಡಿದ್ದಾರೆ. ಜನಾಕ್ರೋಶ'ದ ಬಿಸಿಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡು ಬೀದಿಗೆ ಬಂದಿರುವುದು ನಿಜವಲ್ಲವೇ? ಎಂದು ಪ್ರಶ್ನಿಸಿದೆ.
ಜನಾಕ್ರೋಶದ ಎದುರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ವಕ್ಷೇತ್ರದಲ್ಲಿ ಸೋತರು, ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತರು, ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರದಲ್ಲಿ ಕೇವಲ 1 ಗೆಲುವು, ಬಹುಮತದಲ್ಲಿದ್ದ ಸರ್ಕಾರ 70 ಸ್ಥಾನಕ್ಕೆ ಇಳಿಯಿತು, ಜನವಿರೋಧಿ ಕಾಂಗ್ರೆಸ್ ವಿರುದ್ಧ ಜನಾಕ್ರೋಶ ನಿರಂತರವಾಗಿದೆ ಎಂದು ಟಾಂಗ್ ನೀಡಿದೆ.
ಇನ್ನು ಇದಕ್ಕೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಕಾಂಗ್ರೆಸ್ ಕೇಂದ್ರ ರಾಜ್ಯದ ಡಬಲ್ ಎಂಜಿನ್ ಬಿಜೆಪಿ ಸರಕಾರಗಳು ಮೇಕೆದಾಟು ಯೋಜನೆ ಆರಂಭಿಸಲು ಕಾನೂನಿನ ಯಾವುದೇ ಅಡೆತಡೆ ಇಲ್ಲ. ಆದರೂ ಈ ಎರಡೂ ಸರಕಾರಗಳು ಬದ್ಧತೆ ಪ್ರದರ್ಶಿಸುತ್ತಿಲ್ಲ.ಇದರಿಂದ ನ್ಯಾಯಾಧೀಕರಣ ಮತ್ತು ಪ್ರಾಧಿಕಾರದ ಆದೇಶದ ಅನ್ವಯ ಕರ್ನಾಟಕದ ಪಾಲಿಗೆ ಸಿಗಬೇಕಾದ ಕಾವೇರಿ ನೀರು ಸಮುದ್ರದ ಪಾಲಾಗಿ, ಪೋಲಾಗುತ್ತಿದೆ ಎಂದಿದೆ.