ಶ್ರೀನಗರ, ನ.08 (DaijiworldNews/PY): ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಭಯೋತ್ಪಾದಕರಿಂದ ಗುಂಡಿನ ದಾಳಿ ನಡೆದಿದ್ದು, ಓರ್ವ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಹುತಾತ್ಮರಾದ ಪೊಲೀಸ್ ಸಿಬ್ಬಂದಿಯನ್ನು ತೌಸಿಫ್ ಅಹ್ಮದ್ (29) ಎಂದು ಗುರುತಿಸಲಾಗಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ.
ಶ್ರೀನಗರದ ಬಟ್ಮಾಲೂ ಪ್ರದೇಶದಲ್ಲಿ ಉಗ್ರರು ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.
"ನ.7ರ ಭಾನುವಾರ ರಾತಿ 8 ಗಂಟೆಯ ಸುಮಾರಿಗೆ ಭಯೋತ್ಪಾದಕರು ಜಮ್ಜು-ಕಾಶ್ಮೀರದಲ್ಲಿ ಪೊಲೀಸ್ ಸಿಬ್ಬಂದಿ ತೌಸಿಫ್ ಅಹ್ಮದ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ನಗರದ ಬಟ್ಮಾಲೂ ಪ್ರದೇಶದ ಎಸ್ಡಿ ಕಾಲೋನಿಯಲ್ಲಿರುವ ಪೊಲೀಸ್ ಸಿಬ್ಬಂದಿ ತೌಸಿಫ್ ಅಹ್ಮದ್ ನಿವಾಸದ ಸಮೀಪದಲ್ಲಿ ಉಗ್ರರು ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ" ಎಂದು ಸುದ್ದಿಸಂಸ್ಥೆಯೊಂದಕ್ಕೆ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಸದ್ಯ, ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದು, ಭಯೋತ್ಪಾದಕರ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈ ಕುರಿತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಟ್ವೀಟ್ ಮಾಡಿದ್ದು, "ಪೊಲೀಸ್ ಸಿಬ್ಬಂದಿಯ ಮೇಲೆ ನಡೆದ ದಾಳಿಯನ್ನು ನಾವು ಖಂಡಿಸುತ್ತೇವೆ. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬ ಹಾಗೂ ಸ್ನೇಹಿತರ ಪರವಾಗಿ ನಾವು ನಿಲ್ಲುತ್ತೇವೆ" ಎಂದು ತಿಳಿಸಿದೆ.