ಛತ್ತೀಸ್ಗಡ, ನ.08 (DaijiworldNews/PY): ತನ್ನ ಸಹೋದ್ಯೋಗಿಗಳ ಮೇಲೆ ಸಿಆರ್ಪಿಎಫ್ ಜವಾನನೋರ್ವರು ಗುಂಡು ಹಾರಿಸಿದ ಪರಿಣಾಮ ನಾಲ್ವರು ಯೋಧರು ಹುತಾತ್ಮರಾಗಿದ್ದು, ಮೂವರು ಗಾಯಗೊಂಡ ಘಟನೆ ಸೋಮವಾರ ಛತ್ತೀಸ್ಗಡದ ಸುಕ್ಮಾ ಜಿಲ್ಲೆಯ ಅರೆಸೇನಾ ಪಡೆಯ ಶಿಬಿರದಲ್ಲಿ ನಡೆದಿದೆ.
ಈ ಬಗ್ಗೆ ಪೊಲೀಸ್ ಮಹಾನಿರೀಕ್ಷಕ ಸುಂದರರಾಜ್ ಪಿ ಮಾಹಿತಿ ನೀಡಿದ್ದು, "ಮುಂಜಾನೆ 3.30ರ ಸುಮಾರಿಗೆ ಜಿಲ್ಲೆಯ ಲಿಂಗಂಪಲ್ಲಿ ಗ್ರಾಮದ ಸಿಆರ್ಪಿಎಫ್ನ 50ನೇ ಬೆಟಾಲಿಯನ್ ಶಿಬಿರದಲ್ಲಿ ಈ ಘಟನೆ ನಡೆದಿದೆ" ಎಂದು ಹೇಳಿದ್ದಾರೆ.
"ತನ್ನ ಎಕೆ-47 ರೈಫಲ್ನಿಂದ ಓರ್ವ ಸೈನಿಕ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾನೆ. ಕೂಡಲೇ ಆ ಸೈನಿಕನನ್ನು ಬಂಧಿಸಲಾಗಿದ್ದು, ಆತನ ವಿಚಾರಣೆ ನಡೆಸಲಾಗುತ್ತಿದೆ" ಎಂದಿದ್ದಾರೆ.
"ಘಟನೆಯಲ್ಲಿ ಗಾಯಗೊಂಡ ಸಿಬ್ಬಂದಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಅಧಿಕಾರಿ ಹೇಳಿದ್ದಾರೆ.