ಲಕ್ನೋ, ನ 08 (DaijiworldNews/MS): ಬಾಂಬ್ ಸ್ಫೋಟಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹತ್ಯೆ ಮಾಡುವುದಾಗಿ ವ್ಯಕ್ತಿಯೊಬ್ಬ ಟ್ವಿಟರ್ ಮೂಲಕ ಭಾನುವಾರ ಬೆದರಿಕೆ ಹಾಕಿದ್ದು, ಈ ಕುರಿತು ಯುಪಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
‘ಉತ್ತರ ಪ್ರದೇಶದ ಪೊಲೀಸ್ ಸಹಾಯವಾಣಿ 112 ಮೂಲಕ ಈ ಬೆದರಿಕೆ ಕುರಿತು ಮಾಹಿತಿ ಸಿಕ್ಕಿದ್ದರಿಂದ ವಿಷಯ ಬೆಳಕಿಗೆ ಬಂದಿದೆ. ಬಳಕೆದಾರನ ಬಗ್ಗೆ ಟ್ವಿಟರ್ನಿಂದ ಮಾಹಿತಿ ಕೇಳಲಾಗಿದೆ. ಯಾರೋ ಟ್ವಿಟರ್ನಲ್ಲಿ ಕಿಡಿಗೇಡಿತನ ಮಾಡಿದ್ದಾರೆ. ಈ ಖಾತೆಗಳು ಸಾಮಾನ್ಯವಾಗಿ ವಂಚನೆ ಮಾಡಲೆಂದು ತಪ್ಪು ಹೆಸರು ಬಳಸಿ, ನಕಲಿ ಖಾತೆಗಳನ್ನು ಸೃಷ್ಟಿಸಿರುವುದಾಗಿದೆ. ಹೀಗಾಗಿ ತನಿಖೆ ಪೂರ್ಣಗೊಳ್ಳುವವರೆಗೆ ಹಾಗೂ ಬೆದರಿಕೆವೊಡ್ಡಿದ ವ್ಯಕ್ತಿಯ ಅಧಿಕೃತ ಹೆಸರು ಪತ್ತೆಯಾಗುವವರೆಗೆ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಡಿಸಿಪಿ (ಅಪರಾಧ) ಪ್ರಮೋದಕುಮಾರ್ ತಿವಾರಿ ಹೇಳಿದ್ದಾರೆ.