ನವದೆಹಲಿ, ನ. 07 (DaijiworldNews/SM): ದೇಶದೆಲ್ಲೆಡೆ ಲಸಿಕಾ ಅಭಿಯಾನ ವೇಗ ಪಡೆದುಕೊಂಡಿದ್ದು, ಶೀಘ್ರದಲ್ಲೇ ಮಕ್ಕಳಿಗೂ ಲಸಿಕೆ ವಿತರಣೆಗೆ ಸಿದ್ಧತೆ ನಡೆಯುತ್ತಿದೆ. 12 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟಿದೆ.
'ಝೈಕೋವ್-ಡಿ' ಲಸಿಕೆ 1 ಕೋಟಿ ಡೋಸ್ಗಳನ್ನು ಅಹಮದಾಬಾದ್ ಮೂಲದ ಕಂಪನಿ ಝೈಡಸ್ ಕ್ಯಾಡಿಲಾದಿಂದ ಖರೀದಿಸಲು ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ, ಈ ಲಸಿಕೆಯನ್ನು ರಾಷ್ಟ್ರೀಯ ಕೊರೊನಾ ವೈರಸ್ ವಿರೋಧಿ ಲಸಿಕೆ ಅಭಿಯಾನದಲ್ಲಿ ಸೇರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಮತ್ತೊಂದೆಡೆ ಲಸಿಕೆ ಖರೀದಿಗೆ ಕೇಂದ್ರ ಸರಕಾರ ಮುಂದಾಗಿದ್ದು, ಈಗಾಗಲೇ ಆರ್ಡರ್ ಮಾಡಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಇನ್ನು 28 ದಿನಗಳ ಮಧ್ಯಂತರದಲ್ಲಿ ಮೂರು ಡೋಸ್ ಲಸಿಕೆ ನೀಡಬೇಕು. ಇದು ದೇಶದಲ್ಲಿ ಅಭಿವೃದ್ಧಿಪಡಿಸಲಾದ ವಿಶ್ವದ ಮೊದಲ ಲಸಿಕೆಯಾಗಿದೆ. ಇದು ಡಿಎನ್ಎ ಆಧಾರಿತ ಮತ್ತು ಸೂಜಿ ರಹಿತವಾಗಿದೆ ಎಂದು ಕೇಂದ್ರ ಅರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.