ಮುಂಬೈ, ನ.7 (DaijiworldNews/HR): ಆರ್ಯನ್ ಖಾನ್ ಅವರನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಲಾಗಿದ್ದು, ಅವರನ್ನು ಅಪಹರಿಸಿ ಹಣಕ್ಕೆ ಒತ್ತಾಯಿಸಲಾಗಿತ್ತು ಎಂದು ಎನ್ಸಿಪಿ ಮುಖ್ಯ ವಕ್ತಾರ ಮತ್ತು ಮಹಾರಾಷ್ಟ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ನಾನು ಮಾತನಾಡಲು ಪ್ರಾರಂಭಿಸಿದಾಗಿನಿಂದ ಶಾರುಕ್ ಖಾನ್ಗೆ ಬೆದರಿಕೆ ಹಾಕಲಾಗುತ್ತಿದೆ. ಈ ಪ್ರಕರಣದಲ್ಲಿ ಎನ್ಸಿಬಿ ಕಚೇರಿಯಲ್ಲಿರುವ ನಾಲ್ವರು ಭಾಗಿಯಾಗಿದ್ದಾರೆ. ಸಮೀರ್ ವಾಂಖೆಡೆ, ಅವರ ಕೈಕೆಳಗಿನ ಅಧಿಕಾರಿಗಳಾದ ವಿವಿ ಸಿಂಗ್, ಆಶಿಶ್ ರಂಜನ್ ಮತ್ತು ಚಾಲಕ ಮಾನೆ ಇದರಲ್ಲಿದ್ದಾರೆ" ಎಂದರು.
ಇನ್ನು ಬಿಜೆಪಿ ನಾಯಕ ಮೋಹಿತ್ ಕಾಂಬೋಜ್ ಅಲಿಯಾಸ್ ಮೋಹಿತ್ ಭಾರತೀಯ ಕೂಡ ವಾಂಖೆಡೆಗೆ ಪರಿಚಿತರು. ಸುನೀಲ್ ಪಾಟೀಲ್ ಕೂಡ ಗುಂಪಿನ ಭಾಗವಾಗಿದ್ದಾರೆ. ಆದರೆ, ಸುನೀಲ್ ಪಾಟೀಲ್ಗೂ ಎನ್ಸಿಬಿಗೂ ಸಂಬಂಧವಿಲ್ಲ ಎಂದಿದ್ದಾರೆ.
"ಆರ್ಯನ್ ಖಾನ್ ಐಷಾರಾಮಿ ಹಡಗಿನ ಪಾರ್ಟಿಗೆ ತೆರಳಲು ಟಿಕೆಟ್ ಖರೀದಿಸಿರಲಿಲ್ಲ. ಪ್ರತೀಕ್ ಗಾಬಾ ಮತ್ತು ಅಮೀರ್ ಫರ್ನಿಚರ್ ವಾಲಾ ಅರ್ಯನ್ರನ್ನು ಅಲ್ಲಿಗೆ ಕರೆತಂದಿದ್ದರು. ಇದು ಹಣಕ್ಕಾಗಿ ನಡೆದ ಅಪಹರಣ" ಎಂದು ಹೇಳಿದ್ದಾರೆ.