ಮೈಸೂರು, ನ.07 (DaijiworldNews/PY): "ನಾನು ಎಲ್ಲಿ ಇರಬೇಕು ಎನ್ನುವುದನ್ನು ಜನರು ನಿರ್ಧರಿಸುತ್ತಾರೆ" ಎಂದು ಶಾಸಕ ಜಿ ಟಿ ದೇವೇಗೌಡ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಜೆಡಿಎಸ್ನಲ್ಲಿ ಇರಬೇಕೋ ಅಥವಾ ಬೇಡವೋ ಎನ್ನುವುದನ್ನು ಜನರು ನಿರ್ಧರಿಸುತ್ತಾರೆ. ನಾನು ಕ್ಷೇತ್ರದ ಮತದಾರರು ಹೇಳಿದ ಮಾತನ್ನು ಕೇಳುತ್ತೇನೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಯಾವುದೇ ಅಭಿಪ್ರಾಯವಿದ್ದರೂ ಕೂಡಾ ನನ್ನ ತೀರ್ಮಾನ ಬದಲಾಗದು" ಎಂದಿದ್ದಾರೆ.
"ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಈ ಹಿಂದೆ ವೇದಿಕೆ ಹಂಚಿಕೊಂಡಿದ್ದೆ. ಸಿಎಂ ಬಸವರಾಜ ಬೊಮ್ಮಾಯಿ ಬಂದಾಗಲೂ ಕೂಡಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದೆ. ಆದರೆ, ನಾನು ಪಕ್ಷ ಸೇರುವುದು ಅಥವಾ ಬಿಡುವುದು ಜನರಿಗೆ ಬಿಟ್ಟಿದ್ದು. ಚುನಾವಣೆಗೆ ಇನ್ನೂ ಕೂಡಾ ಸಾಕಷ್ಟು ಸಮಯವಿದೆ. ಎಲ್ಲವೂ ಮತದಾರರ ನಿರ್ಧಾರದಂತೆ ನಡಯುತ್ತದೆ" ಎಂದು ಹೇಳಿದ್ದಾರೆ.
"ಹೆಚ್ಡಿಕೆ ಅವರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದಾಗ ನನಗೆ ಆಹ್ವಾನ ಇರಲಿಲ್ಲ. ಇದೀಗ ಕ್ಷೇತ್ರದಲ್ಲಿ ಕೆಲವು ಕಾಮಗಾರಿ ಉದ್ಘಾಟನೆ ನಡೆಯುತ್ತಿದ್ದು, ಅದಕ್ಕೆ ಸಿದ್ದರಾಮಯ್ಯ ಅವರು ಬರುತ್ತಿದ್ದಾರೆ. ನಾನು ಸ್ಥಳೀಯ ಶಾಸಕನಾಗಿ ಪಾಲ್ಗೊಳ್ಳುತ್ತೇನೆ" ಎಂದು ತಿಳಿಸಿದ್ದಾರೆ.