ಚನ್ನಪಟ್ಟಣ, ನ.07 (DaijiworldNews/PY): "ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ದನಾಗಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ" ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಶಾಸಕನಾದ ಈ ಮೂರು ವರ್ಷದಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಾಗಿರುವ ಅಭಿವೃದ್ದಿ ಹಾಗೂ ಕಳೆದ 20 ವರ್ಷಗಳಿಂದ ಆಗಿದ್ದ ಅಭಿವೃದ್ದಿಯನ್ನು ಕಂಡು ಮಾತನಾಡಬೇಕು. ಸುಮ್ಮನೆ ಟೀಕೆ ಮಾಡುವವರಿಗೆ ನಾನು ಸೊಪ್ಪು ಹಾಕುವುದಿಲ್ಲ" ಎಂದಿದ್ದಾರೆ.
"ಕ್ಷೇತ್ರದ ಬಗ್ಗೆ ಟೀಕೆ ಮಾಡುವವರಿಗೆ ನಾನೇ ಸಿಂದಗಿಗೆ ಬಸ್ ಮಾಡಿಕೊಡುತ್ತೇನೆ. ಇಲ್ಲಿ ನಾವು ಮಾಡಿರುವ ಅಭಿವೃದ್ಧಿ ಕಾರ್ಯವನ್ನು ನೋಡಿ. ಆಗ ಎಲ್ಲವೂ ನಿಮಗೆ ಅರ್ಥವಾಗುತ್ತದೆ" ಎಂದು ಸವಾಲು ಹಾಕಿದ್ದಾರೆ.
"ನಾನು ಸಿಎಂ ಆಗಿದ್ದ ಅವಧಿಯಲ್ಲಿ ನಗರದ ಪಾಲಿಟೆಕ್ನಿಕ್ಗೆ ಕಾಯಕಲ್ಪ ನೀಡುವುದರೊಂದಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ 19.5 ಕೋಟಿ ರೂ. ಅನುದಾನ ನೀಡಿದ್ದೆ. ಆದರೆ, ಬಳಿಕ ಬಂದ ಸರ್ಕಾರ ಆ ಅನುದಾನವನ್ನು ಹಿಂದಕ್ಕೆ ಪಡೆದಿದೆ" ಎಂದು ತಿಳಿಸಿದ್ದಾರೆ.
"ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡುವ ಸಲುವಾರಿ ಅರಳಾಳುಸಂದ್ರ ಗ್ರಾಮದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನೂತನ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. 10 ನೂತನ ಕೊಠಡಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು" ಎಂದಿದ್ದಾರೆ.