ರಾಮನಗರ, ನ.07 (DaijiworldNews/PY): "ನಾನು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎನ್ನುವ ವಿಚಾರ ಸುಳ್ಳು. ಈ ಬಗ್ಗೆ ಉದ್ದೇಶಪೂರ್ವಕವಾಗಿ ವದಂತಿ ಹಬ್ಬಿಸಲಾಗುತ್ತಿದೆ" ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ತಿಳಿಸಿದ್ದಾರೆ.
ಕಾಂಗ್ರೆಸ್ ಯೋಗೇಶ್ವರ್ಗೆ ಗಾಳ ಹಾಕುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನಾನು ಕಾಂಗ್ರೆಸ್ಗೆ ಸೇರುತ್ತೇನೆ ಎಂದು ಪ್ರತಿ ಆರು ತಿಂಗಳಿಗೊಮ್ಮೆ ಈ ರೀತಿಯಾಗಿ ವದಂತಿ ಹಬ್ಬಿಸಲಾಗುತ್ತಿದೆ. ಇದರ ಹಿಂದೆ ಯಾವ ಉದ್ದೇಶ ಅಡಗಿದೆಯೋ ನನಗೆ ತಿಳಿದಿಲ್ಲ" ಎಂದಿದ್ದಾರೆ.
"ನನಗೆ ಬಿಜೆಪಿ ವಿಧಾನ ಪರಿಷತ್ ಸ್ಥಾನದೊಂದಿಗೆ ಹಿಂದಿನ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ಸಹ ನೀಡಿದೆ. ಇನ್ನು ಮುಂದೆಯೂ ಅವಕಾಶ ಸಿಗಲಿದೆ. ಮುಂಬರುವ ಚುನಾವಣೆಗಳಲ್ಲಿಯೂ ನಾನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ" ಎಂದು ಹೇಳಿದ್ದಾರೆ.