ಬೆಂಗಳೂರು, ನ.07 (DaijiworldNews/PY): "ಬಿಟ್ ಕಾಯಿನ್ ವಿಚಾರವನ್ನು ತಿರುಚಲು ಬಿಜೆಪಿ ಹಾಗೂ ಪಕ್ಷದ ಹಿಂದುಳಿದ ವರ್ಗಗಳ ಘಟಕ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ವಿನಾಕಾರಣ ಟೀಕೆ, ಅಪಪ್ರಚಾರ ಮಾಡುತ್ತಿದೆ" ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಮಾತನಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ರಾಮಲಿಂಗಾ ರೆಡ್ಡಿ, "ಬಿಜೆಪಿ ಹಾಗೂ ಪಕ್ಷದ ಹಿಂದುಳಿದ ವರ್ಗಗಳ ಘಟಕ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ವಿನಾಕಾರಣ ಟೀಕೆ, ಅಪಪ್ರಚಾರ ಮಾಡುತ್ತಿದೆ. ವಿಚಾರಗಳನ್ನು ತಿರುಚುವುದು, ಸುಳ್ಳು ಸೃಷ್ಟಿಸುವುದು ಬಿಜೆಪಿಯ ಹುಟ್ಟು ಗುಣ. ಅಧಿಕಾರಕ್ಕೋಸ್ಕರ ಕೆಲವರು ಬಿಜೆಪಿಗೆ ಹೋಗಿದ್ದಾರೆ ಎಂದರೇ ಹೊರತು ಹೊಟ್ಟೆಪಾಡಿಗೆ ಹೋಗಿದ್ದಾರೆ ಎಂದು ಹೇಳಿಲ್ಲ" ಎಂದಿದ್ದಾರೆ.
"2008ರಿಂದ 2013ರವರೆಗೂ ಬಿಜೆಪಿಯ 5 ವರ್ಷ ಸರ್ಕಾರ, 2013ರಿಂದ 2018ರವರೆಗೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹರಿಜನರ ಕಲ್ಯಾಣಕ್ಕೆ ಯಾರು ಏನು ನೀಡಿದ್ದಾರೆ ಎಂದು ನೋಡಿದರೆ ಯಾರಿಗೆ ದಲಿತರು, ತುಳಿತಕ್ಕೆ ಒಳಗಾದವರ ಮೇಲೆ ಕಾಳಜಿ ಇದೆ ಎಂದು ತಿಳಿಯುತ್ತದೆ" ಎಂದು ಹೇಳಿದ್ದಾರೆ.
"ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಪಾಲಿಗೆ ಐತಿಹಾಸಿಕ ಕಾನೂನು ತಂದು ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ನಲ್ಲಿ ಅನುದಾನ ನೀಡಲು ಮುಂದಾಗಿತ್ತು. ದಲಿತರ ಕಲ್ಯಾಣಕ್ಕೆ ಬಿಜೆಪಿ ಸರ್ಕಾರ 5 ವರ್ಷದಲ್ಲಿ ₹22,261 ಕೋಟಿ ಕೊಟ್ಟರೆ, ಕಾಂಗ್ರೆಸ್ ಸರ್ಕಾರ ಅವರಿಗಿಂತ ನಾಲ್ಕು ಪಟ್ಟು ಅಂದರೆ ₹88,395 ಕೋಟಿ ನೀಡಿದೆ" ಎಂದಿದ್ದಾರೆ.