ಶಿವಮೊಗ್ಗ, ನ.07 (DaijiworldNews/PY): "ಮಂದಿರ ಕೆಡವಿ ಮಸೀದಿ ನಿರ್ಮಾಣ ಮಾಡಿರುವ ಹಿಂದೂಗಳ ಎಲ್ಲಾ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ದೇವಾಲಯಗಳ ಜೀರ್ಣೋದ್ಧಾರಕ್ಕೆ ಕೇಂದ್ರ ಸರ್ಕಾರ ಶ್ರಮಿಸಲಿದೆ" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಶಿ ವಿಶ್ವನಾಥ ಮಂದಿರದಲ್ಲಿ ಮಸೀದಿ ಇದೆ. ಮುಂದಿನ ದಿನಗಳಲ್ಲಿ ಅಲ್ಲಿ ಪೂರ್ಣ ಪ್ರಮಾಣದಲ್ಲಿ ದೇವಾಲಯ ನಿರ್ಮಾಣ ಮಾಡಲಾಗುವುದು. ಮಥುರಾದಲ್ಲೂ ಕೂಡಾ ಪೂರ್ಣ ಪ್ರಮಾಣದಲ್ಲಿ ದೇವಾಲಯ ನಿರ್ಮಿಸಲಾಗುವುದು" ಎಂದಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ಸಿಕ್ಕಿದೆ. ಅಲ್ಲಿನ ಮಂದಿರ ಕಾಮಗಾರಿ ಕಂಡು ಕಣ್ಣು ತುಂಬಿ ಬಂದಿದೆ" ಎಂದು ಹೇಳಿದ್ದಾರೆ.
"ಕೇದಾರನಾಥದಲ್ಲಿ 2013ರಲ್ಲಿ ಪ್ರವಾಹ ಬಂದಿತ್ತು. ಪ್ರವಾಹದ ಸಂದರ್ಭ ದೇವಾಲಯದ ಹಿಂಭಾಗದಲ್ಲಿರುವ ಶಂಕರಾಚಾರ್ಯ ಸಮಾಧಿ ಹಾನಿಗೊಂಡಿತ್ತು. ಜೀರ್ಣೋದ್ಧಾರಗೊಂಡ ಆ ಸ್ಥಳದಲ್ಲಿ 12 ಅಡಿ ಎತ್ತರದ ಶಂಕರಾಚಾರ್ಯರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ" ಎಂದು ತಿಳಿಸಿದ್ದಾರೆ.