ಧಾರವಾಡ, ನ.06 (DaijiworldNews/HR): ಯಾವ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆಯೋ ಅಲ್ಲಿ ಇಂಧನದ ಮೇಲಿನ ಬೆಲೆ ಕಡಿಮೆ ಆಗಿದೆಯಾ ಅಥವಾ ಕಡಿಮೆ ಮಾಡುತ್ತಾರಾ ಎಂಬುದನ್ನು ಡಿ.ಕೆ.ಶಿವಕುಮಾರ ಅವರು ರಾಹುಲ್ ಗಾಂಧಿ ಅವರನ್ನು ಕೇಳಿ ಹೇಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಚುನಾವಣೆ ಮುಂದಿಟ್ಟುಕೊಂಡು ಬೆಲೆ ಇಳಿಕೆ ಮಾಡುವುದು ನಮ್ಮ ಪ್ರವೃತ್ತಿಯಲ್ಲ. ಒಟ್ಟಾರೆ ದೇಶದಲ್ಲಿ 29 ಉಪಚುನಾವಣೆಗಳು ನಡೆದಿದ್ದು, ಅದರಲ್ಲಿ 12 ಸ್ಥಾನಗಳಲ್ಲಿ ಎನ್ಡಿಎ ಮೈತ್ರಿಕೂಟ ಗೆಲುವು ಸಾಧಿಸಿದೆ. ಕಾಂಗ್ರೆಸ್ ಹಿಮಾಚಲಪ್ರದೇಶ ಹಾಗೂ ರಾಜಸ್ಥಾನ ಎರಡು ಕಡೆಗಳಲ್ಲಿ ಗೆದ್ದಿದೆ. ನಾವು ತೆಲಂಗಾಣ, ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲೂ ಗೆದ್ದಿದ್ದೇವೆ. ಆಗಲೂ ಸಹ ಇಂಧನದ ಬೆಲೆ ಏರಿಕೆ ಆಗುತ್ತಿತ್ತು. ಇಂಧನ ಬೆಲೆ ಕಂಟ್ರೋಲ್ ಆಗದೇ ಹೀಗೇ ಮುಂದುವರೆದುಕೊಂಡು ಬಂದಿದ್ದು ಕಾಂಗ್ರೆಸ್ ಎಂದರು.
ಇನ್ನು ಇಂದಿನ ಅಂತರರಾಷ್ಟ್ರೀಯ ಮಟ್ಟದಲ್ಲಿ ಏರಿಕೆ ಆಗುತ್ತಿರುವ ಬೆಲೆ ಏರಿಕೆಯನ್ನು ಗಮನಿಸಿ ಅದನ್ನು ನಿಯಂತ್ರಣಕ್ಕೆ ತರುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಆದರೂ ಬೆಲೆ ನಿರಂತರವಾಗಿ ಏರುತ್ತಿದೆ. ಇದರ ಮಧ್ಯೆಯೂ ಜನರಿಗೆ ಸ್ವಲ್ಪ ಹೊರೆ ಕಡಿಮೆ ಮಾಡಿದ್ದೇವೆ" ಎಂದು ಹೇಳಿದ್ದಾರೆ.