ಗೋರಖ್ಪುರ, ನ 06 (DaijiworldNews/MS): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ನಿರ್ಧರಿಸಿದರೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ನಾನು ಯಾವಾಗಲೂ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಮತ್ತು ಭಾರತೀಯ ಜನತಾ ಪಕ್ಷ ಒಪ್ಪುವುದಾದರೇ ನಾನು ಮುಂಬರುವ ಚುನಾವಣೆಯಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸುತ್ತೇನೆ' ಎಂದು ಹೇಳಿದರು.
ಪಕ್ಷವು ಸಂಸದೀಯ ಮಂಡಳಿಯನ್ನು ಹೊಂದಿದೆ ಮತ್ತು ಯಾರು ಎಲ್ಲಿಂದ ಸ್ಪರ್ಧಿಸಬೇಕು ಎಂಬುದನ್ನು ಅದು ನಿರ್ಧರಿಸುತ್ತದೆ ಎಂದು ಅವರು ಹೇಳಿದರು. ಯೋಗಿ ಆದಿತ್ಯನಾಥ್ ಅವರು ಸದ್ಯ ಉತ್ತರ ಪ್ರದೇಶದ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.
ಕಳೆದ 2017ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಬಿಜೆಪಿ ಸರ್ಕಾರ ಏನೆಲ್ಲಾ ಭರವಸೆ ನೀಡಿದೆಯೋ ಅದನ್ನು ಈಡೇರಿಸಿದೆ ಎಂದು ಆದಿತ್ಯನಾಥ್ ಹೇಳಿದ್ದಾರೆ. ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ರಾಜ್ಯ ಮಾದರಿಯಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಗಲಭೆ ನಡೆಯದೆ ದೀಪಾವಳಿ ಸೇರಿದಂತೆ ಎಲ್ಲ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲಾಗಿದೆ ಎಂದು ಆದಿತ್ಯನಾಥ್ ಹೇಳಿದ್ದಾರೆ.