ಮುಂಬೈ, ನ 06 (DaijiworldNews/MS): ಮಹತ್ವದ ಬೆಳವಣಿಗೆಯೊಂದರಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧಿತನಾಗಿರುವ ವಿವಾದಾತ್ಮಕ ಕ್ರೂಸ್ ಡ್ರಗ್ಸ್ ಪ್ರಕರಣದಿಂದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರನ್ನುತನಿಖಾ ತಂಡದಿಂದ ಕೈಬಿಡಲಾಗಿದೆ ಎಂದು ವರದಿಯಾಗಿದೆ.
ಹಲವಾರು ವೈಯಕ್ತಿಕ ಮತ್ತು ಸೇವಾ ಸಂಬಂಧಿತ ಆರೋಪಗಳನ್ನು ಎದುರಿಸುತ್ತಿರುವ ವಾಂಖೆಡೆ ಏಜೆನ್ಸಿಯ ಮುಂಬೈ ವಲಯ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ.
ವರದಿಯ ಪ್ರಕಾರ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿ ಸಮೀರ್ ವಾಂಖೆಡೆ ಅವರನ್ನು ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ಮತ್ತು ಇತರ ಐದು ಪ್ರಕರಣಗಳಿಂದ ತೆಗೆದುಹಾಕಲಾಗಿದ್ದು, ಅವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನು ತನಿಖೆ ನಡೆಸಲಾಗುತ್ತಿದೆ.ಸಂಜಯ್ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡವು ಪ್ರಕರಣದ ತನಿಖೆ ಮುಂದುವರಿಸಲಿದೆ.
ವಾಂಖೆಡೆ ಅವರು 8 ಕೋಟಿ ರೂಪಾಯಿ ಪಾವತಿ ಮತ್ತು ಸುಲಿಗೆ ಆರೋಪ ಎದುರಿಸುತ್ತಿದ್ದಾರೆ.
ಅಧಿಕೃತ ಹೇಳಿಕೆಯಲ್ಲಿ, ಎನ್ಸಿಬಿ, "ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಲಿಂಕ್ ಹೊಂದಿದ್ದು ಇವುಗಳ ಬಗ್ಗೆ ಆಳವಾದ ತನಿಖೆಯನ್ನು ನಡೆಸುವ ಸಲುವಾಗಿ ದೆಹಲಿ ಕಾರ್ಯಾಚರಣೆ ಘಟಕದ ಅಧಿಕಾರಿಗಳ ವಿಶೇಷ ತನಿಖಾ ತಂಡ (ಎಸ್ಐಟಿ) ಆರು ಪ್ರಕರಣಗಳನ್ನು ತನಿಖೆ ನಡೆಸಲಿದೆ" ಯಾವುದೇ ಅಧಿಕಾರಿ ಅಥವಾ ಅಧಿಕಾರಿಗಳನ್ನು ಅವರ ಪ್ರಸ್ತುತ ಪಾತ್ರಗಳಿಂದ ತೆಗೆದುಹಾಕಲಾಗಿಲ್ಲ. ಯಾವುದೇ ನಿರ್ದಿಷ್ಟ ಆದೇಶಗಳನ್ನು ಹೊರಡಿಸುವವರೆಗೆ ಅವರು ತನಿಖೆಗೆ ಅಗತ್ಯವಿರುವಂತೆ ಸಹಾಯ ಮಾಡುವುದನ್ನು ಮುಂದುವರಿಸುತ್ತಾರೆ" ಎಂದು ಅದು ಹೇಳಿದೆ.
ಎನ್ಸಿಪಿ ನಾಯಕ ನವಾಬ್ ಮಲಿಕ್ ಕೂಡ ಟ್ವೀಟ್ ಮಾಡಿದ್ದು, ಆರ್ಯನ್ ಖಾನ್ ಪ್ರಕರಣ ಸೇರಿದಂತೆ 5 ಪ್ರಕರಣಗಳಿಂದ ಸಮೀರ್ ವಾಂಖೆಡೆಯನ್ನು ತೆಗೆದುಹಾಕಲಾಗಿದೆ. 26 ಪ್ರಕರಣಗಳಲ್ಲಿ ತನಿಖೆಯಾಗಬೇಕಿದೆ. ಇದು ಕೇವಲ ಆರಂಭವಾಗಿದೆ. ಈ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಇನ್ನೂ ಬಹಳಷ್ಟು ಕೆಲಸ ಮಾಡಬೇಕಾಗಿದೆ ಮತ್ತು ನಾವು ಅದನ್ನು ಮಾಡುತ್ತೇವೆ ಎಂದು ಬರೆದಿದ್ದಾರೆ.