ಬೆಂಗಳೂರು, ನ.05 (DaijiworldNews/PY): "ಸಿದ್ದರಾಮಯ್ಯನವರೇ, ಸಂವಿಧಾನವನ್ನು ವಿರೋಧಿಸುವವರ ಸಾಲಿನಲ್ಲಿ ಕಾಂಗ್ರೆಸ್ಸಿಗರು ಅಗ್ರಸ್ಥಾನದಲ್ಲಿದ್ದಾರೆ. ನೀವೆಷ್ಟು ಸಂವಿಧಾನ ವಿರೋಧಿಗಳೆಂದು ಅಂಬೇಡ್ಕರ್ ಅವರನ್ನು ನಡೆಸಿಕೊಂಡ ರೀತಿಯಿಂದಲೇ ತಿಳಿಯುತ್ತದೆ" ಎಂದು ಬಿಜೆಪಿ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, "ಎಸ್ಸಿ ಹಾಗೂ ಎಸ್ಟಿ ವಿಶೇಷ ಉಪಯೋಜನೆ ಜಾರಿಗೆ ತಂದಿದ್ದೇ ನಾನು ಎಂದು ಬೀಗುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ, ಅದೇ ಮಾದರಿಯ ಕಾರ್ಯಕ್ರಮವೊಂದು ನೀವು ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಆಂಧ್ರಪ್ರದೇಶದಲ್ಲಿ ಜಾರಿಯಲ್ಲಿತ್ತು ಎಂಬುದು ಗೊತ್ತೇ? ಎಲ್ಲವನ್ನೂ ನಿಮ್ಮ ಹೆಸರಿಗೆ ಬರೆದುಕೊಳ್ಳುವ ದಡ್ಡತನ ಬಿಟ್ಟುಬಿಡುವಿರೆಂದು?" ಎಂದು ಕೇಳಿದೆ.
"ಸಿದ್ದರಾಮಯ್ಯನವರೇ, ಸಂವಿಧಾನವನ್ನು ವಿರೋಧಿಸುವವರ ಸಾಲಿನಲ್ಲಿ ಕಾಂಗ್ರೆಸ್ಸಿಗರು ಅಗ್ರಸ್ಥಾನದಲ್ಲಿದ್ದಾರೆ. ನೀವೆಷ್ಟು ಸಂವಿಧಾನ ವಿರೋಧಿಗಳೆಂದು ಅಂಬೇಡ್ಕರ್ ಅವರನ್ನು ನಡೆಸಿಕೊಂಡ ರೀತಿಯಿಂದಲೇ ತಿಳಿಯುತ್ತದೆ. ಅಂಬೇಡ್ಕರ್ ಮಾದರಿಯಲ್ಲೇ ದಲಿತ ನಾಯಕ ಪರಮೇಶ್ವರ್ ಅವರ ರಾಜಕೀಯ ಜೀವನಕ್ಕೆ ಮುಳ್ಳಾಗಿದ್ದು ಯಾರು?" ಎಂದು ಪ್ರಶ್ನಿಸಿದೆ.
"ಸಿದ್ದರಾಮಯ್ಯನವರೇ, ನಿಮ್ಮ ಅಂಕಿಸಂಖ್ಯೆಗಳ ಜಾಲ, ಒಣ ಭಾಷಣ ಇದ್ಯಾವುದೂ ಬೇಡ. ಎರಡು ಪ್ರಶ್ನೆಗಳಿಗೆ ಉತ್ತರಿಸಿ, 2013 ರ ಚುನಾವಣೆಯಲ್ಲಿ ಪರಮೇಶ್ವರ್ ಅವರ ಸೋಲಿಗೆ ಯಾರು ಕಾರಣ ಎಂದು ತಿಳಿಸುವಿರಾ? ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ದಲಿತ ನಾಯಕರೇ ಮುಖ್ಯಮಂತ್ರಿ ಎಂದು ಘೋಷಿಸುತ್ತೀರಾ?" ಎಂದು ಕೇಳಿದೆ.