ಮುಂಬೈ, ನ.05 (DaijiworldNews/PY): ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಬಾಲಿವುಡ್ ನಟ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಶುಕ್ರವಾರ ಎನ್ಸಿಬಿ ಮುಂದೆ ಹಾಜರಾಗಿದ್ದಾರೆ.
ಪ್ರತಿ ಶುಕ್ರವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯ ನಡುವೆ ಆರ್ಯನ್ ಖಾನ್, ಎನ್ಸಿಬಿಯ ತನಿಖಾಧಿಕಾರಿ ಮುಂದೆ ಹಾಜರಿರಬೇಕು ಹಾಗೂ ತನಿಖೆಗೂ ಸಹಕರಿಸಬೇಕು. ಆರ್ಯನ್ ಹಾಗೂ ಇತರ ಆರೋಪಿಗಳಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡುವ ವೇಳೆ ವಿಧಿಸಿರುವ ಷರತ್ತುಗಳಲ್ಲಿ ಇದು ಒಂದಾಗಿದೆ.
ಆರ್ಯನ್ ಖಾನ್ ಅವರು ಅಕ್ಟೋಬರ್ 30ರಂದು ಜಾಮೀನಿನ ಮೇಲೆ ಹೊರ ಬಂದರು. ಹೈಕೋರ್ಟ್ ನೀಡಿರುವ ಐದು ಪುಟಗಳ ಜಾಮೀನು ಆದೇಶದಲ್ಲಿ ಒಟ್ಟು 14 ಷರತ್ತುಗಳನ್ನು ವಿಧಿಸಿದೆ.
ಹೈಕೋರ್ಟ್ ವಿಧಿಸಿದ ಯಾವುದೇ ಷರತ್ತುಗಳ ಪಾಲನೆಯಲ್ಲಿ ಉಲ್ಲಂಘನೆಯಾದಲ್ಲಿ ಜಾಮೀನು ರದ್ದುಪಡಿಸುವಂತೆ ಕೋರಿ ಎನ್ಸಿಬಿ ಮನವಿ ಸಲ್ಲಿಸಲು ಅವಕಾಶವಿದೆ ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ.