ಬೆಂಗಳೂರು, ನ.05 (DaijiworldNews/PY): ಮನೆ ಬಾಡಿಗೆಗೆ ಕೊಡಲು ಇಟ್ಟಿದ್ದ ಹಣದಿಂದ ಚಿನ್ನಾಭರಣ ಖರೀದಿ ಮಾಡಿದ ಪತ್ನಿಯನ್ನು ಪತಿ ಹತ್ಯೆ ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಜಯನಗರ 1ನೇ ಬ್ಲಾಕ್ನ ದಯಾನಂದನಗರ ನಿವಾಸಿ ಶೇಕ್ ಫಾರೂಕ್ (40) ಎಂದು ಗುರುತಿಸಲಾಗಿದೆ.
ಸೋಮವಾರ ಬೆಳಗ್ಗೆ ಫಾರೂಕ್ ನಾಜಿಯಾಗೆ 6,500 ರೂ. ನೀಡಿ ಮನೆ ಬಾಡಿಗೆ ನೀಡುವಂತೆ ಹೇಳಿದ್ದ ಎಂದು ವರದಿಗಳು ತಿಳಿಸಿವೆ. ಆದರೆ, ಫಾರೂಕ್ ಪತ್ನಿ ನಾಜಿಯಾ ಬಾಡಿಗೆಗೆ ನೀಡಿದ್ದ ಹಣದಿಂದ ಆಭರಣಗಳನ್ನು ಖರೀದಿಸಿದ್ದಾರೆ.
ಬಾಡಿಗೆ ಪಾವತಿಯ ಬಗ್ಗೆ ಫಾರೂಕ್ ನಾಜಿಯಾಳ ಬಗ್ಗೆ ಕೇಳಿದ್ದು, ಈ ವೇಳೆ ಆಕೆ ಸಂಜೆ ಆಭರಣಗಳನ್ನು ಮಾರಾಟ ಮಾಡುವ ಯೋಜನೆಯನ್ನು ತಿಳಿಸಿದ್ದಾಳೆ. ಈ ವಿಚಾರದಿಂದ ಕೋಪಗೊಂಡ ಫಾರೂಕ್ ಜಗಳ ಶುರು ಮಾಡಿದ್ದಾನೆ. ಕೋಪದ ಭರದಿಂದ ಫಾರೂಕ್ ನಾಜಿಯಾಳ ಮುಖಕ್ಕೆ ಹೊಡೆದಿದ್ದು, ಅವಳ ತಲೆಯನ್ನು ಗೋಡೆಗೆ ಬಡಿದಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಾಜಿಯಾಳನ್ನು ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ ಆಕೆ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾಳೆ ಎಂದು ಮೂಲಗಳು ಹೇಳಿವೆ.
ನಾಜಿಯಾಳ ತಾಯಿ ಇಲ್ತಿಯಾಜ್ ಬಿ ನೀಡಿದ ದೂರಿನ ಮೇರೆ ಸಿದ್ದಾಪುರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.